'ತುಂಟಾಟ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನಿರುದ್ಧ್ ಗೆದ್ದಿದ್ದು ಮಾತ್ರ ಕಿರುತೆರೆಯಲ್ಲಿ. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದ ಅನಿರುದ್ಧ್ ಜತ್ಕರ್ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದು ಕಿರುತೆರೆ. ಆರೂರು ಜಗದೀಶ್ ನಿರ್ದೇಶನದ 'ಜೊತೆಜೊತೆಯಲಿ' ಧಾರಾವಾಹಿಯ ಆರ್ಯವರ್ಧನ್ ಪಾತ್ರ ಅವರಿಗೆ ಕೇವಲ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ.
ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ನೀಡಿರುವ ಚಾಲೆಂಜ್ ಸ್ವೀಕರಿಸಲು ನೀವು ರೆಡಿನಾ? - ಅಭಿಮಾನಿಗಳಿಗಾಗಿ ಜೊತೆಜೊತೆಯಲಿ ಆರ್ಯವರ್ಧನ್ ಚಾಲೆಂಜ್
ದಿ. ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದು ಕನ್ನಡಿಗರ ಪ್ರೀತಿ ಗೆದ್ದಿದ್ದಾರೆ. ಇದೀಗ ಅವರು ತಮ್ಮ ಅಭಿಮಾನಿಗಳಿಗಾಗಿ ಗಿಡ ನೆಡುವ ಸವಾಲು ಹಾಕಿದ್ದಾರೆ.ಬಹಳಷ್ಟು ಅಭಿಮಾನಿಗಳು ಈಗಾಗಲೇ ಈ ಚಾಲೆಂಜ್ ಸ್ವೀಕರಿಸಿದ್ದಾರೆ.
![ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ನೀಡಿರುವ ಚಾಲೆಂಜ್ ಸ್ವೀಕರಿಸಲು ನೀವು ರೆಡಿನಾ?](https://etvbharatimages.akamaized.net/etvbharat/prod-images/768-512-4658839-thumbnail-3x2-anirudh.jpg)
ಅನಿರುದ್ಧ್ ನಟನೆಗೆ ಕಿರುತೆರೆಪ್ರಿಯರು ಮನಸೋತಿದ್ದಾರೆ. ಜೊತೆಗೆ ಸತತ ಮೂರು ವಾರಗಳಿಂದಲೂ 'ಜೊತೆಜೊತೆಯಲಿ' ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಧಾರಾವಾಹಿ ಮೂಲಕ ಹೆಸರಾಗಿರುವ ಅನಿರುದ್ಧ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಪ್ರೀತಿಯ ಅಭಿಮಾನಿಗಳಿಗಾಗಿ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಒಂದು ಚಾಲೆಂಜ್ ನೀಡಿದ್ದಾರೆ. ಈ ಚಾಲೆಂಜ್ ಪರಿಸರ ಕಾಳಜಿಗೆ ಸಂಬಂಧಿಸಿದ್ದು ಎಂಬುದು ಸಂತೋಷದ ವಿಷಯ. ಸ್ವತ: ಅನಿರುದ್ಧ್ ಗಿಡ ನೆಟ್ಟು ಆ ಪೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅನಿರುದ್ಧ್ಗೆ ಹಿರಿಯ ನಟಿ ಭಾರತಿ ಕೂಡಾ ಸಾಥ್ ನೀಡಿದ್ದಾರೆ.
'ನೀವು ನಿಮ್ಮ ಕೈಲಾದಷ್ಟು ಗಿಡಗಳನ್ನು ನೆಡಬೇಕು. ಕಡೇಯ ಪಕ್ಷ ಎರಡು ಗಿಡಗಳನ್ನಾದರೂ ನೆಡಬೇಕು. ನಿಮಗೆ ಗಿಡ ನೆಡಲು ಸ್ಥಳಾವಕಾಶ ಇಲ್ಲವಾದರೆ ಬೇಸರ ಮಾಡಿಕೊಳ್ಳಬೇಡಿ. ಒಂದು ಕುಂಡದಲ್ಲೇ ಗಿಡವನ್ನು ನೆಟ್ಟರೆ ಆಯಿತು. ಗಿಡ ನೆಡುವ ಫೋಟೋವನ್ನು #AnirudhChallenge2 ಎಂದು ಬರೆದು ಕಮೆಂಟ್ ಮಾಡಿ. ಜೊತೆಗೆ ನೀವು ಫೋಟೋ ಶೇರ್ ಮಾಡುವಾಗ ಹತ್ತು ಜನ ಸ್ನೇಹಿತರನ್ನು ತಪ್ಪದೇ ಟ್ಯಾಗ್ ಮಾಡಿ ಅವರಿಗೂ ಈ ಚಾಲೆಂಜ್ ಸ್ವೀಕರಿಸುವಂತೆ ಹೇಳಿ. ಕೇವಲ ಗಿಡ ನೆಟ್ಟರೆ ಚಾಲೆಂಜ್ ಮುಗಿಯುವುದಿಲ್ಲ. ಬದಲಿಗೆ ಅದನ್ನು ಚೆನ್ನಾಗಿ ಪೋಷಿಸಬೇಕು. ಒಂದು ತಿಂಗಳ ನಂತರ ಓರ್ವ ಅದೃಷ್ಟಶಾಲಿಯ ಮನೆಗೆ ನನ್ನ ವಿಶೇಷ ಉಡುಗೊರೆ ತಲುಪಲಿದೆ ಎಂದು ಹೇಳಿದ್ದಾರೆ ಅನಿರುದ್ಧ್. ಈಗಾಗಲೇ ಸಾಕಷ್ಟು ಜನ ಅನಿರುದ್ಧ್ ಹಾಕಿದ ಚಾಲೆಂಜ್ ಸ್ವೀಕರಿಸಿದ್ದಾರೆ. ಗಿಡಗಳನ್ನು ನೆಟ್ಟು ಫೋಟೋ ತೆಗೆದು ತಮ್ಮ ಪ್ರೀತಿಯ ನಟ ಅನಿರುದ್ಧ್ ಅವರಿಗೆ ಶೇರ್ ಮಾಡುತ್ತಿದ್ದಾರೆ.