ಕಳೆದ ವರ್ಷವಷ್ಟೇ ಅಂತ್ಯವಾಗಿದ್ದ ಕಲರ್ಸ್ ಕನ್ನಡದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ಅತ್ತಿಗೆ ರಾಧಿಕಾ ಆಗಿ ಅಭಿನಯಿಸಿದ್ದ ನಟಿ ನಿಮಗೆ ನೆನಪಿರಬಹುದು. ಇವರ ನಿಜ ಹೆಸರು ಅನುಷಾ ರಾವ್. ಈಕೆಯ ಅಭಿನಯಕ್ಕೆ ಮನಸೋಲದವರಿಲ್ಲ. ನಟಿಸಿರುವುದು ಕೆಲವೇ ಧಾರಾವಾಹಿಗಳಲ್ಲಾದರೂ ಅನುಷಾ ರಾವ್ ಕಿರುತೆರೆಪ್ರಿಯರಿಗೆ ಬಹಳ ಪರಿಚಿತರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದುರ್ಗಾ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಆರಂಭಿಸಿದ್ದ ಅನುಷಾ ರಾವ್ ಇದೀಗ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಫೇಮಸ್. ಎಂಎಸ್‌ಸಿ ಸೈಕಾಲಜಿ ಮಾಡಿ ಆಸ್ಪತ್ರೆಯಲ್ಲಿ ಕೌನ್ಸಿಲರ್ ಆಗಿದ್ದ ಅನುಷಾ ರಾವ್ ಆಕಸ್ಮಿಕವಾಗಿ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟರು. ಸಿಂಪಲ್ ಸುನಿ ನಿರ್ದೇಶನದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ಅನುಷಾ'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ಮಹೇಶನ ಅಮ್ಮನ ಪಾತ್ರಕ್ಕೆ ಆಡಿಷನ್ ನೀಡಿದ್ದರು. ಆದರೆ ಆ ಪಾತ್ರಕ್ಕೆ ಅವರು ಆಯ್ಕೆ ಆಗಲಿಲ್ಲ. ನಂತರ ಅವರು 'ದುರ್ಗಾ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ನಂತರ ಸುಬ್ಬಲಕ್ಷ್ಮಿ ಸಂಸಾರ, ದೊಡ್ಮನೆ ಸೊಸೆ, ಮನೆಯೇ ಮಂತ್ರಾಲಯ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿದ್ದರು.