ಸಿನಿಮಾವಾಗಲಿ, ಧಾರಾವಾಹಿ ಆಗಲಿ ನಾಯಕ-ನಾಯಕಿ ಅದೆಷ್ಟು ಮುಖ್ಯವೋ ವಿಲನ್ ಕೂಡಾ ಅಷ್ಟೇ ಮುಖ್ಯ. ಅದರಲ್ಲೂ ನಾಯಕಿಗೆ ಸೆಡ್ಡು ಹೊಡೆದು ಗೆಲ್ಲುವ ಛಲ ಹೊಂದಿರುವ ಈ ಖಳನಾಯಕಿಯರ ನಟನೆಗೆ ಮನ ಸೋಲದವರಿಲ್ಲ. ಮನೋಜ್ಞ ಅಭಿನಯದ ಮೂಲಕ ಮನ ಸೆಳೆಯುತ್ತಿರುವ ಬ್ಯೂಟಿಫುಲ್ ವಿಲನ್ಗಳ ಪೈಕಿ ಚಂದನಾ ಮಹಾಲಿಂಗಯ್ಯ ಕೂಡಾ ಒಬ್ಬರು.
ಕಿರುತೆರೆ ನಟಿ ಚಂದನಾ ಮಹಾಲಿಂಗಯ್ಯ ಮುದ್ದಾದ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಈಕೆ ಹೆಸರು ಚಂದನಾ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಏಕೆಂದರೆ ಕಿರುತೆರೆ ಲೋಕದಲ್ಲಿ ಆಕೆಯ ಹೆಸರು ಅಂಕಿತಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ವಿಲನ್ ಅಂಕಿತಾ ಆಗಿ ನಟಿಸುತ್ತಿರುವ ಚಂದನಾ, ನಾಯಕಿ ಗುಬ್ಬಿ ಅಲಿಯಾಸ್ ಮೈಥಿಲಿ ಮತ್ತು ನಾಯಕ ಅಚ್ಚು ಆಲಿಯಾಸ್ ಆರ್ಯನನ್ನು ದೂರ ಮಾಡಲು ಪ್ರಯತ್ನಿಸುತ್ತಿರುತ್ತಾಳೆ.
ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಚಂದನಾ, ನಾಟಕ, ರೂಪಕ, ಡ್ಯಾನ್ಸ್ಗಳಲ್ಲಿ ಸಕ್ರಿಯರಾಗಿದ್ದರು. ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿರುವ ಚಂದನಾಗೆ ನಟನೆಯ ಗೀಳು ಅದ್ಯಾವಾಗ ಹೆಚ್ಚಾಯಿತೋ ಆಗ ನಾಗರಾಜ ಕೋಟೆಯವರ ಬಣ್ಣ ಎಂಬ ನಟನಾ ಶಾಲೆಗೆ ಸೇರಿದರು. ಆರು ತಿಂಗಳು ಈ ಗರಡಿಯಲ್ಲಿ ಪಳಗಿದ ಚಂದನಾ ಆ ಸಮಯದಲ್ಲಿ ಶಿವಾನಂದ ಸಿಂಧಗಿ ನಿರ್ದೇಶನದ 'ಕನಸು' ಎಂಬ ನಾಟಕದಲ್ಲಿ ಪಾತ್ರ ಮಾಡಿದರು. ಕ್ರಮೇಣ ಚಂದನಾಗೆ ಕಿರುತೆರೆ ಮೋಹ ಆರಂಭವಾಯಿತು.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಕನ್ನಿಕೆ 'ಯಲ್ಲಿ ನಾಯಕನ ಸಂಬಂಧಿ ಇಂಚರಾ ಆಗಿ ಅಭಿನಯಿಸಿದ ಚಂದನಾ, ಚಿಕ್ಕ ಪಾತ್ರವಾದರೂ ಚೆನ್ನಾಗಿ ನಟಿಸಿ ವೀಕ್ಷಕರ ಮನ ಸೆಳೆದರು. ನಾಗಕನ್ನಿಕೆಯಲ್ಲಿ ಪಾಸಿಟಿವ್ ಪಾತ್ರದ ಮೂಲಕ ಗಮನ ಸೆಳೆದ ಚಂದನಾ, ಎರಡನೇ ಧಾರಾವಾಹಿಯಲ್ಲೇ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡರು.
ಪೌರಾಣಿಕ ಪಾತ್ರಗಳಲ್ಲಿ ನಟಿಸುವ ಬಯಕೆ ಹೊಂದಿರುವ ನಟಿ ವಿಲನ್ ಆದರೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದ ಚಂದನಾಗೆ ನಟನೆಯ ರೀತಿ ನೀತಿಗಳ ಅರಿವಿದ್ದರೂ ಅಂಕಿತಾ ಪಾತ್ರಕ್ಕೆ ಜೀವ ತುಂಬಲು ಕೊಂಚ ಕಷ್ಟವಾಯಿತಂತೆ. ನಿಜ ಜೀವನದಲ್ಲಿ ಸ್ಟ್ರೈಟ್ ಫಾರ್ವರ್ಡ್ ಹುಡುಗಿಯಾಗಿದ್ದ ಚಂದನಾಗೆ ಅಂಕಿತಾ ಪಾತ್ರದ ಕಳ್ಳಬುದ್ಧಿಗಳನ್ನು ಮಾಡುವುದು ಕಷ್ಟವಾಗುತ್ತಿತ್ತಂತೆ. ಆದರೆ ಪಾತ್ರಕ್ಕೆ ಜೀವ ತುಂಬುವ ಸಲುವಾಗಿ ಆಕೆ ಬಹಳ ಕಷ್ಟಪಟ್ಟು ಯಶಸ್ವಿಯಾದರು. ಎಂದಾದರೊಮ್ಮೆ ಪೌರಾಣಿಕ ಪಾತ್ರದಲ್ಲಿ ಬಣ್ಣ ಹಚ್ಚಬೇಕು ಎಂಬ ಮಹಾದಾಸೆ ಹೊಂದಿರುವ ಚಂದನಾಗೆ ಸಿನಿಮಾ ರಂಗದಲ್ಲೂ ಗುರುತಿಸಿಕೊಳ್ಳುವ ಆಸೆಯಂತೆ.