ನಾಡಿನಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೊಡ್ಡವರು, ಮಕ್ಕಳು ಎನ್ನದೆ ಎಲ್ಲರೂ ಜೊತೆಗೆ ಸೇರಿ ಮನೆ ತುಂಬಾ ದೀಪ ಹಚ್ಚಿ, ಸಿಹಿ ತಿಂದು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.
ಆ ಮಹಾನ್ ವ್ಯಕ್ತಿಗಳಿಗೆ ದೀಪಾವಳಿ ಶುಭ ಕೋರಿದ ಸಾಹಸ ಸಿಂಹನ ಕುಟುಂಬ - ಸೈನಿಕರಿಗೆ ದೀಪಾವಳಿ ಶುಭ ಕೋರಿದ ಅನಿರುದ್ಧ್ ಜತ್ಕರ್
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್, ತಮ್ಮ ಕುಟುಂಬದ ಪರವಾಗಿ ದೇಶದ ಗಡಿಯನ್ನು ಕಾಯುತ್ತಿರುವ ಸೈನಿಕರಿಗೆ, ರೈತರಿಗೆ, ಕಾರ್ಮಿಕರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಕುಟುಂಬ ದೇಶದ ಗಡಿಯನ್ನು ಕಾಯುತ್ತಿರುವ ಸೈನಿಕರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ನಟ ಅನಿರುದ್ಧ್, 'ದೇಶಕ್ಕಾಗಿ ಜೀವ, ಜೀವನವನ್ನು ಮುಡುಪಾಗಿಟ್ಟಿರುವ ನನ್ನ ದೇಶದ ಎಲ್ಲಾ ಸೈನಿಕರಿಗೂ, ಕೆಚ್ಚೆದೆಯ ವೀರರನ್ನು ಭಾರತ ಮಾತೆಯ ಮಡಿಲಿಗೆ ಹಾಕಿರುವ ಎಲ್ಲಾ ನನ್ನ ತಾಯಂದಿರಿಗೂ, ಗಂಡನನ್ನು ಗಡಿಗೆ ಕಳುಹಿಸಿ ಜೀವ ಬಿಗಿ ಹಿಡಿದು ಅವರ ಬರುವಿಕೆಗಾಗಿ ಕಾಯುವ ಎಲ್ಲಾ ನನ್ನ ಸಹೋದರಿಯರಿಗೂ, ತಾ ಬೆಳೆದು ಇತರರ ಹೊಟ್ಟೆ ತುಂಬಿಸುವ ದೊಡ್ಡ ಗುಣದ ರೈತರಿಗೂ ಹಾಗೂ ಎಲ್ಲಾ ವರ್ಗದ ಕಾರ್ಮಿಕ ಬಂಧುಗಳಿಗೂ ಡಾ. ವಿಷ್ಣುವರ್ಧನ್ ಅವರ ಕುಟುಂಬದ ಪರವಾಗಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.. ನಿಮ್ಮಿಂದಲೇ ನಾವುಗಳು.. ನಿಮ್ಮಿಂದಲೇ ಎಲ್ಲಾ ಹಬ್ಬಗಳನ್ನು ನಾವು ನೆಮ್ಮದಿಯಿಂದ ಆಚರಿಸಲು ಸಾಧ್ಯವಾಗಿರುವುದು.. ನಿಮ್ಮ # ಅನಿರುದ್ಧ್' ಎಂದು ಶುಭಾಶಯ ಕೋರಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ವೀಕ್ಷಕರ ಅಚ್ಚುಮೆಚ್ಚಿನ ನಟರಾಗಿದ್ದಾರೆ. ಧಾರಾವಾಹಿ ಆರಂಭವಾದ ಕೆಲವೇ ದಿನಗಳಲ್ಲಿ ಅನಿರುದ್ಧ್ ಹೆಚ್ಚು ಸುದ್ದಿಯಾದರು. ಧಾರಾವಾಹಿ ಕೂಡಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಇದ್ದು, ವೀಕ್ಷಕರ ಸಂಖ್ಯೆಯೂ ಹೆಚ್ಚುತ್ತಿದೆ.