ಜೀ ಕನ್ನಡ ವಾಹಿನಿಯ ಹೊಸ ಧಾರಾವಾಹಿ 'ಜೊತೆ ಜೊತೆಯಲಿ' ಮುಂದಿನ ಸೋಮವಾರದಿಂದ ಪ್ರಾರಂಭವಾಗುತ್ತಿದೆ. ವಾಹಿನಿಯು ಅನಿರುದ್ಧ್ ಹಾಗೂ ಮೇಘನಾ ಶೆಟ್ಟಿ ಅಭಿನಯದ ಹಾಡೊಂದನ್ನು ಪ್ರೇಕ್ಷಕರಿಗಾಗಿ ಬಿಡುಗಡೆ ಮಾಡಿದೆ. ಈ ಹಾಡು ಹಾಗೂ ಧಾರಾವಾಹಿಯ ಕೆಲವು ತುಣುಕುಗಳು ಪ್ರೇಕ್ಷಕರನ್ನು ಆಕರ್ಷಿಸಿದೆ.
45ರ ಉದ್ಯಮಿ 'ಜೊತೆ ಜೊತೆಯಲಿ' 20ರ ಮಿಡ್ಲ್ ಕ್ಲಾಸ್ ಹುಡುಗಿ ಪ್ರೇಮ ಕಥೆ.. ಬರಲಿದೆ ವಿಭಿನ್ನ ಸೀರಿಯಲ್ - ಶಿವಾಜಿರಾವ್ ಜಾಧವ್
ಅನಿರುದ್ಧ್ ಜತ್ಕರ್ ಹಾಗೂ ಮೇಘನಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಜೊತೆ ಜೊತೆಯಲಿ' ಧಾರಾವಾಹಿ ಮುಂದಿನ ಸೋಮವಾರ, ಅಂದರೆ ಸೆಪ್ಟೆಂಬರ್ 9 ರಿಂದ ಆರಂಭವಾಗುತ್ತಿದೆ. ಆರೂರು ಜಗದೀಶ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ನಟ ಅನಿರುದ್ಧ್ ಈಗ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಣ್ಣ ಪರದೆಯಲ್ಲಿ ನಟಿಸುತ್ತಿರುವ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಗೆ ನಾಯಕನಾಗಿದ್ದಾರೆ. ಅವರಿಗೆ ಜೋಡಿಯಾಗಿ ಹೊಸ ನಟಿ ಮೇಘನಾ ಶೆಟ್ಟಿ ಅಭಿನಯಿಸಿದ್ದಾರೆ. ಈಗಾಗಲೇ ‘ಜೊತೆ ಜೊತೆಯಲಿ’ ಪ್ರೋಮೋಗಳು ಬಿತ್ತರವಾಗುತ್ತಿದ್ದು, ವೀಕ್ಷಕರ ಗಮನ ಸೆಳೆದಿವೆ. ಅದಕ್ಕೆ ಕಾರಣ ಈ ಧಾರಾವಾಹಿಯ ವಿಶೇಷ ಕಥಾಹಂದರ. ಗಂಡ-ಹೆಂಡತಿ ನಡುವೆ ಇಂತಿಷ್ಟೇ ವಯಸ್ಸಿನ ಅಂತರ ಇರಬೇಕು ಎಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ. ಆದರೆ 21 ವರ್ಷಗಳ ವಯ್ಸಸ್ಸಿನ ವ್ಯತ್ಯಾಸ ಇರುವವರು ಸತಿ-ಪತಿಯಾದರೆ ಏನಾಗಬಹುದು? ಇಂತಹ ಒಂದು ಎಳೆ ಇಟ್ಟುಕೊಂಡು ‘ಜೊತೆ ಜೊತೆಯಲಿ’ ಧಾರಾವಾಹಿ ಸಿದ್ಧವಾಗಿದೆ.
45 ವರ್ಷದ ಉದ್ಯಮಿ ಹಾಗೂ 20 ವರ್ಷದ ಮಧ್ಯಮ ವರ್ಗದ ಯುವತಿ ನಡುವೆ ನಡೆಯುವ ವಿಶಿಷ್ಟ ಪ್ರೇಮಕಥೆಯನ್ನು ಈ ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. ಕಥೆ ಕೇಳುತ್ತಲೇ ಅದರಲ್ಲಿನ ವಿಶೇಷತೆ ಗುರುತಿಸಿ ಈ ಪಾತ್ರ ನಿರ್ವಹಿಸಲು ಅನಿರುದ್ಧ್ ಒಪ್ಪಿಕೊಂಡರಂತೆ. ಆರ್ಯವರ್ಧನ್ ಎಂಬ ಶ್ರೀಮಂತ ಉದ್ಯಮಿಯಾಗಿ ಅವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಶುಭ ವಿವಾಹ’, ‘ಜೋಡಿ ಹಕ್ಕಿ’ ಖ್ಯಾತಿಯ ಆರೂರು ಜಗದೀಶ್ ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಪೂರ್ವ, ಶಿವಾಜಿರಾವ್ ಜಾಧವ್, ಸುಂದರಶ್ರೀ ಮುಂತಾದ ಕಲಾವಿದರು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಈ ಧಾರಾವಾಹಿಯಲ್ಲಿ ವಿಶೇಷವಾಗಿ ನಾಯಕಿಯ ಮನೆ, ನಾಯಕನ ಕಚೇರಿ ಸೆಟ್ಗಳನ್ನು ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಹಾಗೂ ಸುರೇಶ್ ಬಾಗಣ್ಣ ಹಾಕಿದ್ದಾರೆ. ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.