ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಘರ್ಷ ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿ ಇಂದಿರಾ ಸತ್ಯಮೂರ್ತಿ ಆಗಿ ನಟಿಸುತ್ತಿರುವ ನಟಿ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಅಂದಹಾಗೆ ಈ ನಟಿ ಹೆಸರು ತೇಜಸ್ವಿನಿ. ಸಾಂಸ್ಕೃತಿಕ ನಗರಿ ಮೈಸೂರಿನವರು.
ತಾನು ಆ್ಯಕ್ಟಿಂಗ್ ಜಗತ್ತಿಗೆ ಬರಬೇಕು ಎಂದು ತೇಜಸ್ವಿನಿ ಎಂದೂ ಕನಸು ಕಂಡಿರಲಿಲ್ಲವಂತೆ. ಆಕಸ್ಮಿಕವಾಗಿ ಬಣ್ಣದ ಲೋಕಕ್ಕೆ ಬಂದ ತೇಜಸ್ವಿನಿ ಕಲರ್ಸ್ ಕನ್ನಡ ವಾಹಿನಿಯ 'ಸೌಭಾಗ್ಯವತಿ' ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ನಂತರ ಅವರು ಮಧುಬಾಲಾ, ಮಹಾನದಿ, ನೀಲಿ ಧಾರಾವಾಹಿಯಲ್ಲಿ ನಟಿಸಿದ್ದರು. ಅವರು ನಟಿಸಿರುವುದು ಬೆರಳೆಣಿಕೆ ಧಾರಾವಾಹಿಗಳಲ್ಲಾದರೂ ತೇಜಸ್ವಿನಿ ಧಾರಾವಾಹಿಪ್ರಿಯರಿಗೆ ಬಹಳ ಪರಿಚಿತ.
'ಸಂಘರ್ಷ' ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿ ಆಗಿ ನಟನೆ ಮೊದಲ ಬಾರಿ ಕ್ಯಾಮರಾ ಮುಂದೆ ನಿಲ್ಲುವಾಗ ನನಗೆ ಯಾವುದೇ ರೀತಿಯ ಅಳುಕಿರಲಿಲ್ಲ ಎಂದು ಹೇಳುವ ಈಕೆ ನಟಿಸುತ್ತಲೇ ನಟನೆಯ ರೀತಿ ನೀತಿಗಳನ್ನು ಕಲಿತವರು. ನಟನೆ ಎಂಬುದು ಕೇವಲ ಒಂದೆರಡು ದಿನಗಳಲ್ಲಿ ಕಲಿತು ಬರುವಂತದಲ್ಲ, ಬದಲಿಗೆ ಅನುಭವವೇ ನಟನೆಯನ್ನು ಕಲಿಸುತ್ತದೆ ಎಂಬುದು ಅವರ ಅಭಿಪ್ರಾಯ. 'ಮಹಾನದಿಯ' ಮೇಘನಾ ಪಾತ್ರ ನನಗೆ ಬಹಳ ಜನಪ್ರಿಯತೆ ತಂದು ಕೊಟ್ಟಿತ್ತು. ನಾನು ಎಲ್ಲಿ ಹೋದರೂ ಜನ ನನ್ನನ್ನು ಮೇಘನಾ ಎಂದು ಗುರುತಿಸುತ್ತಾರೆ. ಇದರಿಂದ ಬಹಳ ಸಂತೋಷವಾಗುತ್ತದೆ ಎನ್ನುತ್ತಾರೆ ತೇಜಸ್ವಿನಿ.
ಬಯಸದೆ ಬಣ್ಣದ ಲೋಕಕ್ಕೆ ಕಾಲಿಟ್ಟ ತೇಜಸ್ವಿನಿ ಬಣ್ಣದ ಲೋಕದಲ್ಲಿ ಮಿಂಚಬೇಕೆಂದರೆ ಪ್ರತಿಭೆ ಜೊತೆಗೆ ಅದೃಷ್ಟ ಕೂಡಾ ಎನ್ನುತ್ತಾರೆ ತೇಜಸ್ವಿನಿ. ಬಯಸದೇ ಬಂದ ಬಣ್ಣದ ಲೋಕವನ್ನು ನಾನು ಈಗ ಬಹಳ ಇಷ್ಟಪಡುತ್ತೇನೆ. ನಟನಾರಂಗಕ್ಕೆ ಬಂದು ಒಳ್ಳೆ ಕೆಲಸ ಮಾಡಿದ್ಧೇನೆ ಎನ್ನಿಸುತ್ತಿದೆ. ನನಗೆ ಒಂದೇ ರೀತಿಯ ಪಾತ್ರಗಳು ಇಷ್ಟವಿಲ್ಲ. ವಿಭಿನ್ನ ಪಾತ್ರಗಳಿಗೆ ಜೀವ ತುಂಬಬೇಕು ಎನ್ನುವುದೇ ನನ್ನ ಆಸೆ. ಅವಕಾಶ ದೊರೆತರೆ ಬೆಳ್ಳಿತೆರೆಯಲ್ಲೂ ನಟಿಸುತ್ತೇನೆ ಎನ್ನುತ್ತಾರೆ ತೇಜಸ್ವಿನಿ.
'ಮಹಾನದಿ'ಯ ಮೇಘನಾ ಆಗಿ ಖ್ಯಾತಿ ಪಡೆದ ಚೆಲುವೆ