ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕ ಲಕ್ಕಿಯ ಸೋದರತ್ತೆ ಪುಟ್ಟತ್ತೆ ಆಗಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಪ್ರಥಮಾ ಪ್ರಸಾದ್ ಹಿರಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಪ್ರಥಮಾ ಪ್ರಸಾದ್ ಅವರೇ ಹಂಚಿಕೊಂಡಿದ್ದಾರೆ.
ರಾಜಾ ರವಿ ನಿರ್ದೇಶನದ ಆಚಾರ್ಯ ಶ್ರೀಶಂಕರ ಸಿನಿಮಾದಲ್ಲಿ ಶಂಕರಾಚಾರ್ಯರ ತಾಯಿ ಆರ್ಯಾಂಬಾ ಆಗಿ ಪ್ರಥಮಾ ಪ್ರಸಾದ್ ನಟಿಸುತ್ತಿದ್ದು, ತಮ್ಮ ಪಾತ್ರದ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪ್ರಥಮಾ ಪ್ರಸಾದ್, ಆರ್ಯಾಂಬಾ ಆಗಿ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನನ್ನ ಪಾಲಿಗೆ ಸೌಭಾಗ್ಯವೇ. ಜಿ.ವಿ.ಅಯ್ಯರ್ ಅವರ ಸಿನಿಮಾದಲ್ಲಿ ಎಲ್.ವಿ.ಶಾರದಾ ಅವರು ಆರ್ಯಾಂಬಾ ಆಗಿ ಅಭಿನಯಿಸಿದ್ದರು. ಇದೀಗ ಆ ಸುವರ್ಣಾವಕಾಶ ನನ್ನ ಪಾಲಾಗಿದೆ. ಇದು ನಿಜಕ್ಕೂ ತುಂಬಾ ಸವಾಲಿನ ಪಾತ್ರ ಎಂದು ಬರೆದುಕೊಂಡಿದ್ದಾರೆ.