ಉದಯ ವಾಹಿನಿಯಲ್ಲಿ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಂದಿನಿ' ನವಿರಾದ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕಳೆದ ವರ್ಷ ನಂದಿನಿ ಧಾರಾವಾಹಿ ಮುಕ್ತಾಯಗೊಂಡಿದ್ದು, ಅದರ ಸೀಕ್ವೆಲ್ ಅರ್ಥಾತ್ ನಂದಿನಿ ಭಾಗ 2 ಅತಿ ಶೀಘ್ರದಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಸೆಪ್ಟೆಂಬರ್ನಲ್ಲೇ ಕೇಳಿ ಬಂದಿತ್ತು.
ನಂದಿನಿ ಭಾಗ 1 ರಲ್ಲಿ ನಿತ್ಯಾ ರಾಮ್ ಹಾಗೂ ಛಾಯಾ ಸಿಂಗ್ ನಟಿಸಿದ್ದು, ಸೀಸನ್ 2 ರ ನಾಯಕಿಯಾಗಿ ಮೇಘಶ್ರೀ ಆಯ್ಕೆ ಆಗಿದ್ದರು. ಧಾರಾವಾಹಿಯ ಪ್ರೋಮೋ ಜೊತೆಗೆ ಒಂದಷ್ಟು ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಶ್ಚರ್ಯ ಎಂಬಂತೆ 'ನಂದಿನಿ 2' ಧಾರಾವಾಹಿಯ ಶೂಟಿಂಗ್ ಆರಂಭವಾಗಿದ್ದರೂ, ಧಾರಾವಾಹಿ ಪ್ರಸಾರವಾಗಲೇ ಇಲ್ಲ. ಈ ಕುರಿತು ನಟಿ ಮೇಘಶ್ರೀ ಬೇಸರ ಹೊರಹಾಕಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಸೂಪರ್ ನ್ಯಾಚುರಲ್ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಾನು ನಾಗಿಣಿ ಶೇಷಳಾಗಿ ಅಭಿನಯಿಸಿದ್ದೆ. ಇದೀಗ ಮತ್ತೆ ನಾಗಿಣಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದೆ. ಜೊತೆಗೆ ಸೀರಿಯಲ್ ಪ್ರಿಯರು ಈ ಧಾರಾವಾಹಿ ನೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾಯುತ್ತಿದ್ದೆ. ಈಗಾಗಲೇ ನಂದಿನಿ ಭಾಗ 2 ರ ಪ್ರೋಮೋ ಜೊತೆಗೆ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶೂಟಿಂಗ್ ಕೂಡಾ ಆರಂಭವಾಗಿತ್ತು. ಕೊನೆಯಲ್ಲಿ ಈ ಧಾರಾವಾಹಿ ಪ್ರಸಾರ ಆಗುತ್ತಿಲ್ಲ ಎಂಬ ವಿಚಾರ ಕೇಳಿ ಬಂದಾಗ ನಿಜವಾಗಿಯೂ ಶಾಕ್ ಆಯ್ತು. ಆದರೆ ಈಗಲೂ ಕೂಡಾ ಧಾರಾವಾಹಿ ಪ್ರಸಾರ ಆಗದಿರುವುದಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲ. ಒಟ್ಟಿನಲ್ಲಿ ಸಮಯದ ಜೊತೆಗೆ ಶ್ರಮವೂ ವ್ಯರ್ಥವಾಗಿದೆ" ಎಂದು ಕಿರುತೆರೆಪ್ರಿಯರೊಂದಿಗೆ ಬೇಸರ ಹಂಚಿಕೊಂಡಿದ್ದಾರೆ.