ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಮಧು ತಂಗಿ ಮೀನಾ ಆಗಿ ಅಭಿನಯಿಸುತ್ತಿರುವ ನಟಿ ಹೆಸರು ಮೇಘ. ಈ ಚೆಲುವೆ ಕಿರುತೆರೆಗೆ ಬಂದ ಕಥೆ ಬಹಳ ರೋಚಕವಾಗಿದೆ.
ಆ್ಯಕ್ಟಿಂಗ್ ಜೊತೆಜೊತೆಗೆ ಭರತನಾಟ್ಯದಲ್ಲಿ ವಿದ್ವತ್ಗೆ ತಯಾರಾಗುತ್ತಿರುವ ನಟಿ - Istadevate fame Vaidehi
'ಇಷ್ಟದೇವತೆ' ಧಾರಾವಾಹಿ ಮೂಲಕ ಬಣ್ಣದ ಪಯಣ ಆರಂಭಿಸಿದ ನಟಿ ಮೇಘ, ಉತ್ತಮ ಭರತನಾಟ್ಯ ಕಲಾವಿದೆ ಕೂಡಾ. ನಟನೆ ಜೊತೆಜೊತೆಗೆ ಈ ನಟಿ ಭರತನಾಟ್ಯ ವಿದ್ವತ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾರೆ.

ಹಿರಿಯ ನಟಿ ಲಕ್ಷ್ಮಿ ನಡೆಸಿಕೊಡುತ್ತಿದ್ದ 'ನೀನಾ ನಾನಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೇಘ, ಅಲ್ಲಿ ಸೌತ್ ಇಂಡಿಯನ್ ಗರ್ಲ್ಸ್ ವರ್ಸಸ್ ನಾರ್ತ್ ಇಂಡಿಯನ್ ಗರ್ಲ್ಸ್ ತಂಡದಲ್ಲಿ ದಕ್ಷಿಣ ಭಾರತದ ಯುವತಿಯರ ಪರ ಮಾತನಾಡಿದ್ದರು. ನಂತರ ಬಣ್ಣದ ಲೋಕಕ್ಕೆ ಬರುವ ನಿರ್ಧಾರ ಮಾಡಿದ ಮೇಘ, ಆಡಿಷನ್ಗಳಲ್ಲಿ ಭಾಗವಹಿಸಲು ಆರಂಭಿಸಿದರು. ಒಮ್ಮೆ ರಂಜನಿ ರಾಘವನ್, ಮೇಘಾಗೆ ಕರೆ ಮಾಡಿ 'ಇಷ್ಟದೇವತೆ' ಧಾರಾವಾಹಿಯ ನಾಯಕಿ ಬದಲಾಗುತ್ತಿದ್ದಾರೆ. ಆಡಿಷನ್ನಲ್ಲಿ ನೀವು ಆಯ್ಕೆಯಾಗಿದ್ದೀರಿ ಎಂದಾಗ ಮೇಘಾಗೆ ಆದ ಖುಷಿ ಅಷ್ಟಿಷ್ಟಲ್ಲ.
ಮೊದಲ ಬಾರಿಗೆ 'ಇಷ್ಟದೇವತೆ' ಧಾರಾವಾಹಿಯ ವೈದೇಹಿಯಾಗಿ ಮೇಘ ಕಾಣಿಸಿಕೊಂಡರು. ಈಗ ಜೀವ ಹೂವಾಗಿದೆ ಧಾರಾವಾಹಿ ಮೂಲಕ ಹೆಸರಾಗಿರುವ ಮೇಘ, ನಟನೆಯ ಹೊರತಾಗಿ ಅದ್ಭುತ ನೃತ್ಯಗಾರ್ತಿ ಕೂಡಾ ಹೌದು. ಭರತನಾಟ್ಯ ನನ್ನ ಜೀವ ಎಂದು ಹೇಳುವ ಮೇಘ ಭರತನಾಟ್ಯದಲ್ಲಿ ಸೀನಿಯರ್ ಪರೀಕ್ಷೆ ಮುಗಿಸಿ ವಿದ್ವತ್ಗೆ ತಯಾರಿ ನಡೆಸುತ್ತಿದ್ದಾರೆ. ಮೈಸೂರು ದಸರಾ, ಕೇರಳ, ಮಂತ್ರಾಲಯ, ತಮಿಳುನಾಡು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ವೇದಿಕೆಗಳಲ್ಲಿ ಮೇಘ ನೃತ್ಯ ಪ್ರದರ್ಶನ ಮಾಡಿದ್ದಾರೆ. 'ಅಡಚಣೆಗಾಗಿ ಕ್ಷಮಿಸಿ' ಚಿತ್ರದ ಮೂವರು ನಾಯಕಿಯರಲ್ಲಿ ಒಬ್ಬರಾಗಿ ನಟಿಸಿರುವ ಮೇಘ, ಉತ್ತಮ ಕಥೆ, ಅವಕಾಶ ದೊರೆತರೆ ಬೆಳ್ಳಿತೆರೆಯಲ್ಲಿ ನಟಿಸುತ್ತಾರಂತೆ.