ಧಾರಾವಾಹಿ ಅಥವಾ ರಿಯಾಲಿಟಿ ಶೋ ಮೂಲಕ ವೀಕ್ಷಕರಿಗೆ ಪರಿಚಯವಾದ ಎಷ್ಟೋ ಪ್ರತಿಭೆಗಳು ಈಗ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅದೇ ರೀತಿ ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಮೂಲಕ ಮನರಂಜನಾ ಪ್ರಿಯರಿಗೆ ಪರಿಚಯವಾದ ಚಂದನ್ ಕುಮಾರ್ ಕೂಡಾ ಈಗ ಕಿರುತೆರೆಯೊಂದಿಗೆ ಬೆಳ್ಳಿತೆರೆಯಲ್ಲೂ ಹೆಸರು ಮಾಡಿದ್ದಾರೆ.
ಹಳೆಯ ದಿನಗಳನ್ನು ಮೆಲುಕು ಹಾಕಿದ ಚಂದನ್ ಕುಮಾರ್ - Lakshmi baramma fame Chandan
ಸುಮಾರು 10 ವರ್ಷಗಳ ಹಿಂದೆ ತಾವು ಭಾಗವಹಿಸಿದ್ದ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋ ಫೋಟೋಗಳನ್ನು ಚಂದನ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಚಂದನ್ ಕನ್ನಡ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲೂ ಕಮಾಲ್ ಮಾಡಿದ್ದಾರೆ. 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿ ಮೂಲಕ ಚಂದನ್ ಕುಮಾರ್ ತೆಲುಗು ಪ್ರೇಕ್ಷಕರ ಮನದಲ್ಲೂ ಸ್ಥಾನ ಪಡೆದಿದ್ದಾರೆ. ರಿಯಾಲಿಟಿ ಶೋ ನಂತರ 'ರಾಧಾ ಕಲ್ಯಾಣ' ಧಾರಾವಾಹಿಯ ವಿಶು ಆಗಿ ಕಿರುತೆರೆಗೆ ಬಂದ ಚಂದನ್ ಕುಮಾರ್ ನಂತರ 'ಲಕ್ಷ್ಮಿ ಬಾರಮ್ಮ ಧಾರಾವಾಹಿ' ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಇದರೊಂದಿಗೆ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯ ಶಂಕರನಾಗಿ ಕೂಡಾ ಚಂದನ್ ಹೆಸರು ಸಂಪಾದಿಸಿದರು.
ಪರಿಣಯ, ಲೈಫು ಇಷ್ಟೇನೆ, ಲವ್ ಯೂ ಆಲಿಯಾ, ಪ್ರೇಮ ಬರಹ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾ ರಂಗದಲ್ಲಿಯೂ ಕಾಣಿಸಿಕೊಡಿರುವ ಚಂದನ್ ಈಗ ಹತ್ತು ವರ್ಷಗಳ ಹಿಂದಿನ ನೆನಪಿಗೆ ಜಾರಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅಕುಲ್ ಬಾಲಾಜಿ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋನಲ್ಲಿ ತಾವು ಭಾಗವಹಿಸಿದ್ದ ಕೆಲವೊಂದು ಫೋಟೋಗಳನ್ನು ಚಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 'ಇದು ನಿಮಗೆ ನೆನಪಿದ್ಯಾ..ಸುಮಾರು 10 ವರ್ಷಗಳಾಗುತ್ತಾ ಬಂತು' ಎಂದು ಕ್ಯಾಪ್ಷನ್ ಹಾಕಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.