ನಟ ಅನಿರುದ್ಧ್ ಜತ್ಕರ್ ಅವರ ಇನ್ಸ್ಟಾಗ್ರಾಂ ಒಂದು ಲಕ್ಷ ಫಾಲೋವರ್ಸ್ ತಲುಪಿದೆ. ಕಿರುತೆರೆಯಲ್ಲಿ ವಿಭಿನ್ನ ಕಥೆ ಹಾಗೂ ನಿರೂಪಣೆ ಮೂಲಕ ಗಮನ ಸೆಳೆದಿರುವ ಜೊತೆ ಜೊತೆಯಲಿ ಧಾರಾವಾಹಿಯ ನಾಯಕ ಅನಿರುದ್ಧ್ ದಿನೇದಿನೆ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಂನಲ್ಲಿ ಒಂದು ಲಕ್ಷ ಫಾಲೋವರ್ಸ್ಗಳಾಗಿದ್ದಾರೆ. 'ನಿಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು' ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಅನಿರುದ್ಧ್.
ನಟನೆಯ ಜೊತೆಗೆ ಸಾಮಾಜಿಕ ಕಾಳಜಿ ಹೊಂದಿರುವ ಅನಿರುದ್ಧ್ ಇತ್ತೀಚೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಆಡಳಿತ ವರ್ಗ, ಜನಪ್ರತಿನಿಧಿಗಳ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಉದ್ಯಮಿ 'ಆರ್ಯವರ್ಧನ್' ಆಗಿ ನಟಿಸುತ್ತಿರುವ 45 ವರ್ಷದ ಆರ್ಯವರ್ಧನ್, 21 ವರ್ಷದ ಅನು ಸಿರಿ ಮನೆಯನ್ನು ಪ್ರೀತಿಸುವುದು ಧಾರಾವಾಹಿಯ ಕಥಾಹಂದರವಾಗಿದೆ.
ಧಾರಾವಾಹಿ ಆರಂಭದಿಂದಲೂ ಟಾಪ್-3 ಸ್ಥಾನದಲ್ಲಿದೆ. ಹೆಚ್ಚು ಯುವಕ-ಯುವತಿಯರನ್ನು ಸೆಳೆಯುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಧಾರಾವಾಹಿ ಮರಾಠಿಯ 'ತುಲಾ ಪಹತೆ ರೇ'ನ ರಿಮೇಕ್ ಆಗಿದೆ. ಆದರೂ, ಇಲ್ಲಿನ ನೆಟಿವೀಟಿಗೆ ತಕ್ಕಂತೆ ಸನ್ನಿವೇಶಗಳನ್ನು ಬದಲಿಸಲಾಗಿದೆ.
ಧಾರಾವಾಹಿ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ನಟ ವಿಜಯ್ ಸೂರ್ಯ ಹಾಗೂ ಸುಧಾರಾಣಿ ಅತಿಥಿ ಪಾತ್ರದಲ್ಲಿ ಕಾಣಿಸಿದ್ದಾರೆ. ಅಲ್ಲದೇ, ಧಾರಾವಾಹಿಯ ಒಂದು ಸನ್ನಿವೇಶಕ್ಕಾಗಿ ತಂಡ ಇಂದು ರಾಮನಗರದ ಕಲ್ಲು ಬಂಡೆಗಳ ಮೇಲೆ ಚಿತ್ರೀಕರಣ ನಡೆಸುತ್ತಿದೆ.