'ರಾಧಾಕಲ್ಯಾಣ' ಧಾರಾವಾಹಿಯ ವಿಶು ಆಗಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಚಂದನ್ ಕುಮಾರ್ ನಟನಾ ಕ್ಷೇತ್ರದಲ್ಲಿ ಯಶಸ್ವಿ 10 ವರ್ಷಗಳನ್ನು ಪೂರೈಸಿದ್ದಾರೆ. ಆ್ಯಕ್ಟಿಂಗ್ಗೆ ಬರುವ ಮುನ್ನ ಚಂದನ್ ರಿಯಾಲಿಟಿ ಶೋ ಮೂಲಕ ವೀಕ್ಷಕರಿಗೆ ಪರಿಚಯವಾದರು.
ಚಂದನ್ ಬಣ್ಣದ ಬದುಕಿಗೆ 10 ವರ್ಷಗಳು ರಿಯಾಲಿಟಿ ಶೋ ನಂತರ ಆಕಸ್ಮಿಕವಾಗಿ ನಟನಾ ರಂಗಕ್ಕೆ ಬಂದ ಚಂದನ್, ಇಂದು ತಮ್ಮ ಪರಿಶ್ರಮದಿಂದಲೇ ಕಲಾರಂಗದಲ್ಲಿ ಹೆಸರು ಗಳಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಚಂದನ್ ಕಿರುತೆರೆ ಪ್ರವೇಶಿಸಿದರು. ಇತರ 12 ಸ್ಪರ್ಧಿಗಳಿಗಿಂತ ಚಂದನ್ ಕಡಿಮೆ ಸಮಯದಲ್ಲಿ ರಾಜ್ಯದ ಮನ ಗೆದ್ದಿದ್ದರು.
'ರಾಧಾ ಕಲ್ಯಾಣ' ಧಾರಾವಾಹಿಯ ವಿಶಾಲ್ ಭಾರದ್ವಾಜ್ ಆಗಿ ನಟಿಸಿದ ಚಂದನ್, ನಂತರ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ಕಾಣಿಸಿಕೊಂಡಿದ್ದರು. ಕಾರಣಾಂತರಗಳಿಂದ ಚಂದು ಪಾತ್ರದಿಂದ ಹೊರಬಂದ ಚಂದನ್ ಕುಮಾರ್, ಬಿಗ್ಬಾಸ್ ಸೀಸನ್ 3 ರಲ್ಲಿ ಭಾಗವಹಿಸಿ ರನ್ನರ್ ಅಪ್ ಸ್ಥಾನ ಪಡೆದರು. 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್ ಬಂದ ಚಂದನ್, ಮಹಾಶಂಕರನ ಪಾತ್ರದ ಮೂಲಕ ಪ್ರೇಕ್ಷಕರ ಪ್ರೀತಿ ಸಂಪಾದಿಸಿದರು.
ತೆಲುಗು ಕಿರುತೆರೆಯಲ್ಲೂ ನಟಿಸುತ್ತಿರುವ ನಟ
ಕಿರುತೆರೆ ಜೊತೆಗೆ ಸಿನಿಮಾಗಳಲ್ಲಿ ಕೂಡಾ ನಟಿಸಿರುವ ಚಂದನ್, ಎರಡೊಂದ್ಲ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023, ಪ್ರೇಮಬರಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಬಾಲರಾಜು ಆಗಿ ನಟಿಸುವ ಮೂಲಕ ಪರಭಾಷೆಯಲ್ಲೂ ಮನರಂಜನೆ ನೀಡುತ್ತಿದ್ದಾರೆ. ಈ ಧಾರಾವಾಹಿ ಕನ್ನಡ ಭಾಷೆಗೆ ಡಬ್ ಆಗಿದ್ದು'ಸನ್ ಆಫ್ ಸಾವಿತ್ರಮ್ಮ' ಎಂಬ ಹೆಸರಿನಲ್ಲಿ ಪ್ರಸಾರ ಕಾಣುತ್ತಿದೆ.