ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಕನ್ನಡದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಅವರ ಮುಂಬರುವ ಕನ್ನಡ ಚಿತ್ರ ‘ಡಾ 56’ ಅಲ್ಲಿ ಖಡಕ್ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಇತ್ತ ತೆಲುಗಿನ ‘ವಿರಾಟ ಪರ್ವಂ’ ಸಿನಿಮಾದಲ್ಲಿ ನಕ್ಸಲೈಟ್ ಪಾತ್ರ ನಿರ್ವಹಿಸಿದ್ದಾರೆ.
‘ವಿರಾಟ ಪರ್ವಂ’ ಸಿನಿಮಾಗೆ ವೇಣು.ಯು ಅವರು ನಿರ್ದೇಶಕರಾಗಿದ್ದು, ಚಿತ್ರದಲ್ಲಿ ರಾಣಾ ದಗ್ಗುಬಾಟಿ ಪೊಲೀಸ್ ಅಧಿಕಾರಿಯಾಗಿಯೂ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿತಾ ದಾಸ್, ನವೀನ್ ಚಂದ್ರ, ಜಾರಿನ ವಾಹಬ್, ರಾಹುಲ್ ರಾಮಕೃಷ್ಣ, ಈಶ್ವರಿ ರಾವ್, ಸಾಯಿ ಚಂದ್ ಹಾಗೂ ಇತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ನಕ್ಸಲ್ ಪಾತ್ರ ಮಾಡುವಾಗ ನಿಜವಾದ ರೈಫಲ್ ಹಿಡಿಯುವುದು ಎಷ್ಟು ಕಷ್ಟ ಎನ್ನುವ ಕುರಿತು ಪ್ರಿಯಾಮಣಿಯವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಇದು ಸಾಮಾಜಿಕ-ರಾಜಕೀಯ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ರೈಫಲ್ ಹಿಡಿಯಲು ಯಾವುದೇ ತರಬೇತಿಯನ್ನು ಅವರಿಗೆ ನೀಡಿಲ್ಲವಂತೆ. ಭಾರವಾದ ರೈಫಲ್ ತಂದು ಚಿತ್ರೀಕರಣ ಮಾಡಿರುವುದಲ್ಲದೆ ಹೊಸ ಅನುಭವಗಳನ್ನು ಈ ಚಿತ್ರತಂಡದಿಂದ ಪಡೆದುಕೊಂಡಿದ್ದೇನೆ ಎಂದಿದ್ದಾರೆ.
1990 ರ ದಶಕದ ಹಿನ್ನೆಲೆ ಇರುವ ‘ವಿರಾಟ ಪರ್ವಂ’ ಸಿನಿಮಾದ ನಿರ್ಮಾಣವನ್ನು ಡಿ.ಸುರೇಶ್ ಬಾಬಿ ಹಾಗೂ ಸುಧಾಕರ್ ಚೇರುಕುರಿ ಮಾಡಿದ್ದಾರೆ. ಸುರೇಶ್ ಬೊಬ್ಬಿಲಿ ಸಂಗೀತ, ದನಿ ಸಂಚೆಜ್ ಲೋಪೇಜ್ ಮತ್ತು ದಿವಾಕರ್ ಮಣಿ ಛಾಯಾಗ್ರಹಣ ಮಾಡಿದ್ದಾರೆ.