ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ರಾಘವೇಂದ್ರ ರಾಜ್ಕುಮಾರ್ ಅಭಿನಯಿಸಿರುವ 'ತ್ರಯಂಬಕಂ' ಸಿನಿಮಾ ಇಂದು ಬಿಡುಗಡೆಯಾಗಿದೆ. ದಯಾಳ್ ಮತ್ತೊಮ್ಮೆ ಪ್ರೇಕ್ಷಕರ ಮನಸಿಗೆ ಕನ್ನ ಹಾಕಿದ್ದಾರೆ.
ಮೊದಲಾರ್ಧ ಅವರು ಮನಸ್ಸಿಗೆ ಹೆಚ್ಚು ಕೆಲಸ ಕೊಟ್ಟು ಆನಂತರ ಉದ್ವವ ಆದ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರ ನೀಡುತ್ತಾರೆ. ಅವರ ‘ಆ ಕರಾಳ ರಾತ್ರಿ’ ಯ ಶಾರ್ಪ್ ತಂತ್ರ ಇಲ್ಲಿ ಮೈನಸ್ ಆಗಿದೆ. ಕೆಲವೊಂದು ದೃಶ್ಯಗಳು ಇಷ್ಟವಾಗದಿದ್ದರೂ ಅವರ ತಂತ್ರಗಾರಿಗೆ ವಿರಾಮದ ನಂತರ ಆರಾಮವಾಗಿ ಸಾಗುತ್ತದೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಕೂಡಾ ಚೆನ್ನಾಗಿ ಸಹಕರಿಸಿವೆ. 5000 ವರ್ಷದ ಹಿಂದಿನ ನವಪಾಷಾಣ ಹಾಗೂ ಶಿವಲಿಂಗ ಚಿತ್ರದ ಕೇಂದ್ರಬಿಂದು.
ಶಿವರುದ್ರಯ್ಯನಿಗೆ (ರಾಘವೇಂದ್ರ ರಾಜಕುಮಾರ್) ಸದಾ ಮಗಳ ಬಗ್ಗೆ ಚಿಂತೆ. ಮಗಳಿಗೆ ಅಪಘಾತ ಆಗಿ ಮರಣ ಹೊಂದಿರುವ ಕನಸು ಹೆಚ್ಚಾಗಿ ಬರುವುದೇ ಇದಕ್ಕೆ ಕಾರಣ. ಇದರೊಂದಿಗೆ ಆ ಕನಸಲ್ಲಿ ಬರುವ ಕೆಲವೊಂದು ವ್ಯಕ್ತಿಗಳು ನಿಜಜೀವನದಲ್ಲಿ ಅವರ ಕಣ್ಣ ಮುಂದೆ ಬರುತ್ತಿರುತ್ತಾರೆ. ಹೀಗೆಲ್ಲಾ ಜರುಗುವುದಕ್ಕೆ ಬ್ರೈನ್ ಸ್ಟ್ರೋಕ್ ಕಾರಣ ಆದರೆ, ನಿಮ್ಮ ಕನಸು ನಿಜ ಎಂದು ಡಾಕ್ಟರ್ ಹೇಳಿದಾಗ ಪ್ರೇಕ್ಷಕ ನಿಜಕ್ಕೂ ಕಂಗಾಲಾಗುತ್ತಾನೆ.
ತಂದೆಯ ಈ ಸಂದಿಗ್ಧ ಪರಿಸ್ಥಿತಿಯನ್ನು ಪುತ್ರಿ ನಮನ ( ಅನುಪಮಾ ಗೌಡ) ಹಾಗೂ ಪ್ರಿಯಕರ ಓಂಕಾರ್ (ರೋಹಿತ್) ಹೇಗೆ ಬಗೆಹರಿಸುತ್ತಾರೆ..? ಶಿವರುದ್ರಯ್ಯ ಕಾಣುವ ಕನಸುಗಳಿಂದ ಮುಕ್ತಿ ಹೊಂದುತ್ತಾರಾ ಎಂಬುದು ಸಸ್ಪೆನ್ಸ್. ಶಿವರುದ್ರಯ್ಯನ ಪಾತ್ರ ರಾಘವೇಂದ್ರ ರಾಜಕುಮಾರ್ ಅವರಿಗೆ ಹೇಳಿ ಮಾಡಿಸಿದಂತಿದೆ. ಅನುಪಮ ಗೌಡ ನಟನೆ ಕೂಡಾ ಚೆನ್ನಾಗಿದೆ. ಇನ್ನು ರೋಹಿತ್ ಪತ್ತೇದಾರಿ ಓಂಕಾರ್ ಆಗಿ ಗಮನ ಸೆಳೆಯುತ್ತಾರೆ. ಸುಂದರ್ ವೀಣ, ಶಿವಮಣಿ ಹಾಗೂ ಶ್ರುತಿ ನಾಯಕ್ ಪಾತ್ರಗಳು ಕೂಡಾ ಗುಡ್.
ಸಂದೀಪ್ ಈ ಸಿನಿಮಾವನ್ನು ನಿರ್ಮಿಸಿದ್ಧಾರೆ. ಚಿತ್ರದ ಸಂಕಲನ ಕಾರ್ಯವನ್ನು ಇನ್ನಷ್ಟು ಬಿಗಿಯಾಗಿ ನಿರ್ವಹಿಸಬಹುದಿತ್ತು. ಗಣೇಶ್ ನಾರಾಯಣ್ ಅವರ ಸಂಗೀತ ಮನಸಿಗೆ ನಾಟುತ್ತದೆ. ರಾಕೇಶ್ ಅವರ ಛಾಯಾಗ್ರಹಣ ಕೆಲಸ ಅಚ್ಚುಕಟ್ಟಾಗಿದೆ. ಇದು ನಿಜಕ್ಕೂ ನಿಮ್ಮನ್ನು ಕಾಡುವ ಸಿನಿಮಾ. ಹೃದಯಕ್ಕೆ ಹತ್ತಿರವಾಗುವ ಸಿನಿಮಾವನ್ನು ನೀವು ಖಂಡಿತ ನೋಡಬಹುದು.