ಕರ್ನಾಟಕ

karnataka

ETV Bharat / sitara

ಮನೆಮಂದಿ ಕುಳಿತು ನಕ್ಕು ನಲಿಯುವಂಥ ಸಿನಿಮಾ 'ಸವರ್ಣದೀರ್ಘಸಂಧಿ' - ಸವರ್ಣದೀರ್ಘಸಂಧಿ ಚಿತ್ರದ ರಿವ್ಯೂ

ಸವರ್ಣದೀರ್ಘಸಂಧಿ

By

Published : Oct 18, 2019, 10:38 AM IST

‘ಚಾಲಿ ಪೊಲೀಲು’ ತುಳು ಸಿನಿಮಾದ ಯಶಸ್ವಿ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶಿಸಿ, ನಾಯಕನಾಗಿ ನಟಿಸಿರುವ 'ಸವರ್ಣದೀರ್ಘಸಂಧಿ' ಸಿನಿಮಾ ಇಂದು ಬಿಡುಗಡೆ ಆಗಿದೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ಉತ್ತಮ ವ್ಯಾಕರಣ ಬದ್ಧ ಸಿನಿಮಾ ಇದು ಎನ್ನಬಹುದು. ಚಿತ್ರದಲ್ಲಿ ಪ್ರೀತಿ, ಪ್ರೇಮ, ಆ್ಯಕ್ಷನ್, ಕುತೂಹಲ, ಸಸ್ಪೆನ್ಸ್ ವಿಷಯಗಳನ್ನು ನಿರ್ದೇಶಕ ವೀರೇಂದ್ರ ಶೆಟ್ಟಿ ನವಿರಾಗಿ ಹೇಳಿರುವುದು ಸಿನಿಮಾದ ಮೊದಲ ಶಕ್ತಿ.

ಮುದ್ದಣ್ಣ ಅಲಿಯಾಸ್ ತಿಮ್ಮ (ವೀರೇಂದ್ರ ಶೆಟ್ಟಿ ಕಾವೂರ್​​) ಎಂಬ ರೌಡಿ ತನ್ನ ಸಂಗಡಿಗರೊಂದಿಗೆ ಮುದ್ದಣ್ಣ ಗ್ಯಾಂಗ್ ಎಂಬ ರೌಡಿ ತಂಡ ಕಟ್ಟಿಕೊಂಡಿರುತ್ತಾನೆ. ಜೀವನದಲ್ಲಿ ನಡೆದ ಕೆಲವೊಂದು ಕಹಿ ಘಟನೆಗಳಿಂದ ಮುದ್ದಣ್ಣ ರೌಡಿ ಆಗಿ ಬದಲಾಗುತ್ತಾನೆ. ತನ್ನದೊಂದು ರೌಡಿ ಗ್ಯಾಂಗ್ ಇದೆ ಎಂಬ ಸಣ್ಣ ಸುಳಿವು ಕೂಡಾ ನೀಡದೆ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತಾನೆ. ಈ ಮುದ್ದಣ್ಣ ಗ್ಯಾಂಗನ್ನು ಏನಾದರೂ ಮಾಡಿ ಹಿಡಿಯಬೇಕು ಎಂಬ ಸವಾಲ್ ಪೊಲೀಸರ ಮುಂದಿರುತ್ತದೆ. ಇದರೊಂದಿಗೆ ಇನ್ನೊಂದು ರೌಡಿ ಗ್ಯಾಂಗ್ ಕೂಡಾ ಈ ಮುದ್ದಣ್ಣ ತಂಡಕ್ಕೆ ವಿರುದ್ಧವಾಗಿ ನಿಲ್ಲುತ್ತದೆ. ಇನ್ನು ಬಾಲ್ಯದಲ್ಲಿ ಕಳೆದುಕೊಂಡ ಪ್ರೇಯಸಿ ಹಾಗೂ ಕನ್ನಡ ಕಲಿಸಿದ ಮೇಷ್ಟ್ರನ್ನು ಮುದ್ದಣ್ಣ ಪಡೆಯುತ್ತಾನೆ. ಅವರು ದೊರೆತ ಮೇಲೆ ಮುದ್ದಣ್ಣ ಜೀವನದಲ್ಲಿ ನಡೆಯುವ ಘಟನೆಗಳೇನು...? ಪೊಲೀಸರು ಮುದ್ದಣ್ಣ ತಂಡವನ್ನು ಹಿಡಿಯುವರೇ..? ಮತ್ತೊಂದು ರೌಡಿ ಗ್ಯಾಂಗ್ ಮುದ್ದಣ್ಣ ಗ್ಯಾಂಗ್​ ಮೇಲೆ ಎರಗುವುದಾ ಇಲ್ಲವಾ...? ಇನ್ನು ಈ ಚಿತ್ರಕ್ಕೆ 'ಸವರ್ಣದೀರ್ಘಸಂಧಿ' ಎಂದು ಹೆಸರಿಡಲು ಕಾರಣವೇನು ಎಂಬುದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.

ವೀರೇಂದ್ರ ಶೆಟ್ಟಿ , ಕೃಷ್ಣಾ ಭಟ್​​ ಅಭಿನಯ ಚೆನ್ನಾಗಿದೆ. ಮನೋಮೂರ್ತಿ ಅವರ ಹಾಡುಗಳು ಕೇಳಲು ಇಂಪಾಗಿವೆ. ಲೋಕನಾಥನ್ ಶ್ರೀನಿವಾಸನ್ ಅವರ ಛಾಯಾಗ್ರಹಣ ಕೂಡಾ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕುಳಿತು ನೋಡಿ ನಕ್ಕುನಲಿಯುವ ಸಿನಿಮಾ ಇದು ಎಂದರೆ ತಪ್ಪಾಗುವುದಿಲ್ಲ.

ABOUT THE AUTHOR

...view details