ಆ್ಯಕ್ಷನ್ ಚಿತ್ರಗಳ ಮಾಸ್ಟರ್ ಸುನೀಲ್ ಕುಮಾರ್ ದೇಸಾಯಿ ನಿರೀಕ್ಷೆಯಂತೆ ಸಸ್ಪೆನ್ಸ್, ಥ್ರಿಲ್ಲಿಂಗ್ ಹಾಗೂ ಸಾಹಸ ತುಂಬಿಕೊಂಡಿರುವ 'ಉದ್ಘರ್ಷ' ಚಿತ್ರವನ್ನು ಇಂದು ತೆರೆಗೆ ತಂದಿದ್ದಾರೆ.
ಕೊಲೆಯಲ್ಲಿ ತೆರೆದುಕೊಳ್ಳುವ ಚಿತ್ರಕಥೆ :
ಹೊಸ ವರ್ಷದ ಆಚರಣೆಗೆ ಆದಿತ್ಯ (ನಟ ಅನೂಪ್ ಸಿಂಗ್ ಠಾಕೂರ್ ) ತನ್ನ ಪ್ರೇಯಸಿ ರಶ್ಮಿ (ಸಾಯಿ ಧನ್ಸಿಕಾ ) ಜತೆಗೆ ರೆಸಾರ್ಟ್ಗೆ ಬಂದಿರುತ್ತಾರೆ. ಆದಿತ್ಯ, ತಾನು ಮರೆತಿದ್ದ ಮೊಬೈಲ್ ನ ಕಾರಿನಿಂದ ತೆಗೆದುಕೊಂಡು ಬರುವಷ್ಟರಲ್ಲೇ, ಅದೇ ರೆಸಾರ್ಟ್ನಲ್ಲಿ ಒಂದು ಕೊಲೆ ನಡೆಯುತ್ತೆ. ಅದನ್ನು ರಶ್ಮಿ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿರುತ್ತಾಳೆ.
ಇತ್ತ ಆದಿತ್ಯ ಮೊಬೈಲ್ ತೆಗೆದುಕೊಂಡು ಬರುವಷ್ಟರಲ್ಲಿ ರಶ್ಮಿ ಕಾಣೆಯಾಗಿರುತ್ತಾಳೆ. ಕೊಲೆ ಮಾಡಿರುವ ಧರ್ಮೇಂದ್ರ (ನಟ ಕಬೀರ್ ದುಹಾನ್ ಸಿಂಗ್ ) ತಂಡ ಆಕೆಯನ್ನು ಬೆನ್ನಟ್ಟಿಸಿಕೊಂಡು ಹೋಗಿರುತ್ತೆ. ಆ ಕತ್ತಲೆ ರಾತ್ರಿಯಲ್ಲಿ ರಶ್ಮಿ ಒಂದು ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟುಕೊಳ್ಳುತ್ತಾಳೆ.
ಇಲ್ಲಿಂದ ಆದಿತ್ಯ, ರಶ್ಮಿ ಹುಡುಕಾಡುವುದಕ್ಕೆ ಇನ್ನಿಲ್ಲದಂತೆ ಕಷ್ಟ ಪಡುತ್ತಾನೆ. ಅದು ರೋಚಕ ಹಾಗೂ ಥ್ರಿಲ್ ತುಂಬಿದ ಸಂಗತಿಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಧರ್ಮೇಂದ್ರ ತನ್ನ ಕ್ರೂರ ಕೃತ್ಯದ ವಿಡಿಯೋಗಳನ್ನು ರಶ್ಮಿ ಮೊಬೈಲ್ನಿಂದ ಪಡೆಯುತ್ತಾನೆಯೇ ? ಆದಿತ್ಯನಿಗೆ ರಶ್ಮಿ ಸಿಗುತ್ತಾಳೆಯೇ ಎಂಬುದಕ್ಕೆ ಉತ್ತರ ಪಡೆಯಲು ಚಿತ್ರಮಂದಿರಕ್ಕೆ ಹೋಗಬೇಕು.
ನಾಯಕ ಅನೂಪ್ ಸಿಂಗ್ ಸಖತ್ ಪವರ್ಫುಲ್ ಅಭಿನಯ ನೀಡಿದ್ದಾರೆ. ಅವರು ಹಿಂದಿ ಸಿನಿಮಾದಲ್ಲಿ ಸಿಗದ ಅವಕಾಶ ಕನ್ನಡ ಸಿನಿಮಾದಲ್ಲಿ ಗಿಟ್ಟಿಸಿಕೊಂಡು ಗೆದ್ದಿದ್ದಾರೆ. ನಟಿ ಸಾಯಿ ಧನ್ಸಿಕಾ ಕಷ್ಟಪಟ್ಟು ಅಭಿನಯ ಮಾಡಿದ್ದಾರೆ. ತಾನ್ಯ ಹೊಪ್ ಪಾತ್ರಕ್ಕೆ ಅಷ್ಟು ಮಹತ್ವವಿಲ್ಲ. ಕಬೀರ್ ಸಿಂಗ್ ದುಹಾನ್ ಕ್ರೂರ ಧರ್ಮೇಂದ್ರನಾಗಿ ಭಯ ಬಿಳಿಸುವಷ್ಟು ಗುಡುಗಿದ್ದಾರೆ. ಕಿಶೋರ್, ಶ್ರದ್ಧಾ ದಾಸ್, ವಂಶಿ ಕೃಷ್ಣ, ಶ್ರವಣ್ ರಾಘವೇಂದ್ರ ಹೀಗೆ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಬಾಲಿವುಡ್ನ ಸಂಜೋಯ್ ಚೌಧರಿ ಅವರ ಸಂಗೀತ ಸಹ ಇಲ್ಲಿ ಪ್ರಮುಖವಾದ ಪಾತ್ರ ವಹಿಸಿದೆ.
‘ಉದ್ಘರ್ಷ’ ಸುನೀಲ್ ಕುಮಾರ್ ದೇಸಾಯಿ ಅವರ ವೃತ್ತಿ ಜೀವನದಲ್ಲಿ ಬಹಳ ಮುಖ್ಯ ಸಿನಿಮಾ. ಅವರ ಈ ಹಿಂದಿನ ಕೆಲವು ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋತಿವೆ. ಆದರೆ, ಈ ಬಾರಿ ಸುನೀಲ್ ಕುಮಾರ್ ದೇಸಾಯಿ ಥ್ರಿಲ್ಲರ್ ಅಂಶಗಳನ್ನು ಬಹಳ ಜಾಗರೂಕತೆಯಿಂದ ಜೋಡಿಸಿದ್ದಾರೆ.
ಚಿತ್ರದಲ್ಲಿ ಸಾಹಸ ವಿಪರೀತ ಅನ್ನಿಸುತ್ತೆ. ಆದರೆ, ಕಟ್ಟುಮಸ್ತಾದ ಅನೂಪ್ ಸಿಂಗ್ ಠಾಕೂರ್ ಇರುವುದರಿಂದ ಈತ ಇಷ್ಟೊಂದು ಸಾಹಸ ಮಾಡಬಲ್ಲನಾ ಅಂತಲೂ ಅನ್ನಿಸುತ್ತದೆ. ಇದೊಂದು ಪರಿಪೂರ್ಣ ಆ್ಯಕ್ಷನ್, ಥ್ರಿಲ್ಲರ್ ಸಿನಿಮಾವಾಗಿದ್ದರಿಂದ ಹಿನ್ನೆಲೆ ಸಂಗೀತ ಸೊಗಸಾಗಿದೆ. 131 ನಿಮಿಷದ ಸಿನಿಮಾ ಪ್ರೇಯಸಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಒಳ್ಳೆಯ ಉದಾಹರಣೆ.