ಕರ್ನಾಟಕ

karnataka

ETV Bharat / sitara

ಎಲ್ಲರೂ ಒಪ್ಪುವಂತಹ 'ಕವಚ'...ಈ ಚಿತ್ರಕ್ಕೆ ಶಿವಣ್ಣ ಅಭಿನಯವೇ 'ರಕ್ಷಾ ಕವಚ' - undefined

ಕವಚ

By

Published : Apr 5, 2019, 4:24 PM IST

ಹ್ಯಾಟ್ರಿಕ್ ಹೀರೋ ಶಿವಣ್ಣ ಒಂದು ದಶಕದ ಬಳಿಕ ರಿಮೇಕ್ ಚಿತ್ರ 'ಕವಚ'ದಲ್ಲಿ ನಟಿಸಿದ್ದಾರೆ. ಅವರು ಮನೋಜ್ಞ ಕಥೆಯ ಮಲಯಾಳಂ ಸಿನಿಮಾ ‘ಒಪ್ಪಂ’ ಆಯ್ಕೆ ಮಾಡಿ ರೀಮೇಕ್ ಮಾಡಿರುವುದು ಮೆಚ್ಚತಕ್ಕ ವಿಚಾರ. ಯಾಕಂದ್ರೆ ಒಂದು ಚಿತ್ರ ರೀಮೇಕ್ ಮಾಡಿದರೂ ಅದರಲ್ಲಿ ಸತ್ವ ಇರಬೇಕು ಎಂದು ನಂಬಿರುವ ಶಿವಣ್ಣ, ಈ ಸಿನಿಮಾ (ಒಪ್ಪಂ) ಸರಿಯಾದ ಆಯ್ಕೆಯನ್ನೇ ಮಾಡಿಕೊಂಡಿದ್ದಾರೆ.

ಚಿತ್ರದಲ್ಲಿ ಜಯರಾಮನಾಗಿ ಶಿವಣ್ಣ ಅವರ ಅಭಿನಯವೇ ‘ಕವಚ’ ಚಿತ್ರದ ರಕ್ಷಾ ಕವಚ. ಅವರ ಪಾತ್ರದಲ್ಲಿ ಮಿಡಿಯುವ ಹೃದಯವಿದೆ. ಪರರ ಒಳ್ಳೆಯದಕ್ಕೆ ಕೊರಗುವ ಮನಸ್ಸಿದೆ. ಎಂತಹ ಕಷ್ಟ ಬಂದರೂ ಕಾಪಾಡಬೇಕು ಎಂಬ ಹಂಬಲವಿದೆ. ಸ್ವಾರ್ಥ ಅಂತೂ ಇಲ್ಲವೇ ಇಲ್ಲ. ದೃಷ್ಟಿ (ಕುರುಡ) ಇಲ್ಲದಿದ್ದರೂ ಸೃಷ್ಟಿಯ ಪರಿಚಯ ಜಯರಾಮನಿಗಿದೆ. ವಾಸನೆ ಹಾಗೂ ಶಬ್ಧದಿಂದ ಎಲ್ಲವನ್ನೂ ಪತ್ತೆ ಮಾಡಿಬಿಡುತ್ತಾನೆ. ಈ ಎಲ್ಲ ಅಂಶಗಳಲ್ಲಿ ನಿರ್ದೇಶಕ ಜಿ‌.ವಿ.ಆರ್ ವಾಸು ಅತಿ ಹೆಚ್ಚು ಶಿವಣ್ಣ ಅವರನ್ನು ದುಡಿಸಿಕೊಂಡು ಗೆದ್ದಿರುವುದು ಮಂಧ್ಯಂತರದ ನಂತರವೇ.

ಕೊಟ್ಟ ಮಾತಿಗೆ ತಪ್ಪದ ಜಯರಾಮ ಪುಟ್ಟ ನಂದಿನಿ ಪಾಲಿಗೆ ರಾಮಪ್ಪ. ಕಾರಣ ಕೊಲೆಯಾದ ನ್ಯಾಯಾಧೀಶ ಕೃಷ್ಣಮೂರ್ತಿ ಜಯರಾಮನನ್ನು ನಂದಿನಿಗೆ ಹಾಗೆ ಪರಿಚಯ ಮಾಡಿಸಿರುತ್ತಾರೆ. ಆದರೆ, ಈ ಕೃಷ್ಣಮೂರ್ತಿ ಕೊಲೆ ಹಿಂದೆ ಒಂದು ಕಥೆ ಇದೆ. ಅದನ್ನು ಮಾಡಿದವನೆ ಕ್ರೂರ ವಾಸುದೇವ (ವಸಿಷ್ಠ ಸಿಂಹ). ಅದಕ್ಕೂ ಕಾರಣವಿದೆ. ಆದರೆ, ವಾಸುದೇವನ ಮಂಕು ಬುದ್ದಿ ಕೊಲೆ ಮಾಡಿಸಿರುತ್ತದೆ. ಅಸಲಿಯಾಗಿ ನ್ಯಾಯಾಧೀಶ ಕೃಷ್ಣಮೂರ್ತಿ ತೀರ್ಪು ನೀಡಿ ವಾಸುದೇವನ ಮಗಳನ್ನು ತಾನೇ ಸಾಕುತ್ತಾನೆ. ಅವನಿಗೆ ಚೆನ್ನಾಗಿ ಗೊತ್ತು ಒಂದು ದಿವಸ ತನಗೆ ವಾಸುದೇವನಿಂದ ಆಪತ್ತಿದೆ ಎಂದು.

ಆಗ ನ್ಯಾಯಾದೀಶ ಅಂಧ ಜಯರಾಮನ ಆಶ್ರಯ ಕೋರುತ್ತಾನೆ. ತಾನು ಸಾಕುತ್ತಿರುವ ಮಗು ಅದು ವಾಸುದೇವನದು ಎಂದು ನಿಜ ಹೇಳಿರುತ್ತಾನೆ. ಹಾಗೆ ಅವಳನ್ನು ರಕ್ಷಿಸಬೇಕು ಎಂದು ಜಯರಾಮನಲ್ಲಿ ವಿನಂತಿ ಮಾಡಿರುತ್ತಾನೆ. ಕಾರಣ ಏನಪ್ಪಾ ಅಂದರೆ ವಾಸುದೇವ ಪುಟ್ಟ ಹುಡುಗಿ ನ್ಯಾಯಾಧೀಶನ ಮಗಳು ಎಂದು ತಪ್ಪು ತಿಳಿದುಕೊಂಡಿರುತ್ತಾನೆ.

ದೊಡ್ಡ ಜವಾಬ್ದಾರಿ ಜಯರಾಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ. ಆದರೆ, ನ್ಯಾಯಾಧೀಶನ ಕೊಲೆ ಆಪಾದನೆಯೇ ಇವನ ಮೇಲೆ ಬರುವುದು. ಅತ್ತ ಕಡೆ ಜಯರಾಮ ತನ್ನ ಕುಟುಂಬದಲ್ಲಿ ಸಹೋದರ ಹಾಗೂ ಸಹೋದರಿ ತಪ್ಪು ತಿಳಿದು ಇವನನ್ನು ದೂರ ಇಡುತ್ತಾರೆ. ಇದರ ಜೊತೆಗೆ ನ್ಯಾಯಾಧೀಶ ಬ್ಯಾಂಕ್​ನಿಂದ ಒಂದು ಕೋಟಿ ರೂ. ತೆಗೆದು ಜಯರಾಮನಿಗೆ ಕೊಟ್ಟಿದ್ದಾರೆ ಎಂಬ ವಿಷಯ ಜಯರಾಮನನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ. ಈ ಎಲ್ಲ ಸಂಕಷ್ಟಗಳಿಂದ ಆಚೆ ಬರಲು ಜಯರಾಮನಿಗೆ ಸಹಾಯವಾಗಿ ಪೊಲೀಸ್ ಅಧಿಕಾರಿ ಗೌರಿ (ಇಶಾ ಕೊಪ್ಪಿಕರ್) ಜೊತೆಯಾಗುತ್ತಾರೆ.

ಈ ಚಿತ್ರದಲ್ಲಿ ಶಿವಣ್ಣ ಅವರದು ಮನೋಜ್ಞ ಅಭಿನಯ. ಭಾವನೆಗಳನ್ನೂ ವ್ಯಕ್ತ ಮಾಡುವುದರಲ್ಲಿ ಶಿವಣ್ಣ ಮೇಲುಗೈ ಸಾಧಿಸಿದ್ದಾರೆ. ಅಂಧನಾಗಿ ಆರಂಭದಿಂದ ಕೊನೆಯವರೆಗೆ ಕಣ್ಣಿನ ಬಗ್ಗೆ ಜಾಗೂರಕಥೆಯಿಂದ ನಿರ್ವಹಿಸಿದ್ದಾರೆ. ಶಿವಣ್ಣ ಅವರ ಅನೇಕ ಅತ್ಯುತ್ತಮ ಸಿನಿಮಾಗಳ ಸಾಲಿನಲ್ಲಿ ಈ ‘ಕವಚ’ ಸಹ ಸೇರುತ್ತದೆ.

ವಸಿಷ್ಠ.ಎನ್. ಸಿಂಹ ಕ್ರೂರ ವಾಸುದೇವ ಆಗಿ ಸಕ್ಕತ್ ಆಗಿ ಕಾಣಿಸಿಕೊಂಡಿದ್ದಾರೆ. ಹೆಜ್ಜೆ ಹೆಜ್ಜೆಗೂ ಅವರ ಅಭಿನಯ ಸಾಮರ್ಥ್ಯ ಹಿಗ್ಗುತ್ತಾ ಹೋಗುತ್ತದೆ. ಬಾಲ ನಟಿ ಮೀನಾಕ್ಷಿ ಅಭಿನಯ ಅಚ್ಚುಕಟ್ಟು, ಪೊಲೀಸ್ ಅಧಿಕಾರಿಯಾಗಿ ಇಶಾ ಕೊಪ್ಪಿಕ್ಕರ್ ಒಪ್ಪುತ್ತಾರೆ. ರವಿ ಕಾಳೆ ಅವರ ದುಷ್ಟ ಅಧಿಕಾರಿ ಪಾತ್ರ ಸಹ ಅವರಿಗೆ ಹೇಳಿ ಮಾಡಿಸಿದಂತೆ ಇದೆ. ಕೃತಿಕಾ ಜಯರಾಂ ರಶ್ಮಿ ಆಗಿ ಸುಂದರವಾಗಿ ಕಾಣಿಸುವುದಲ್ಲದೆ ಪಾತ್ರ ಪೋಷಣೆ ಸಹ ಚನ್ನಾಗಿ ನಿರ್ವಹಿಸಿದ್ದಾರೆ. ಬಾಲರಾಜ್ ಡಾ.ರಾಜಕುಮಾರ್ ಅವರ ಸಹೋದರಿ ಮಗ ಬಹಳ ವರ್ಷಗಳ ನಂತರ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಭಟ್, ಕೃಷ್ಣ ಹೆಬ್ಬಾಲ್, ತಬಲಾ ನಾಣಿ ಅವರ ಪೋಷಕ ಪಾತ್ರಗಳು ಸೂಕ್ತವಾದ ಆಯ್ಕೆ.

ಅರ್ಜುನ ಜನ್ಯ ಸಂಗೀತದಲ್ಲಿ 'ಅಪ್ಪ ಬೇಕಪ್ಪ' ಹಾಡು ಬಹಳ ಕಾಲ ಉಳಿಯುವಂತಿದೆ. ಅದರ ಗಾಯಕಿಗೆ ಒಳ್ಳೆಯ ಭವಿಷ್ಯವಿದೆ. ಅಣ್ಣಾವ್ರ ಹಾಡು 'ಹೊಸ ಬೆಳಕು'....ಮತ್ತೆ ಕೇಳುವಂತಿದೆ.
ಛಾಯಾಗ್ರಾಹಕ ರಾಹುಲ್ ಶ್ರೀವತ್ಸವ್ ಕೆಲಸ ಅದ್ಭುತವಾಗಿದೆ. ಚಿತ್ರದ ಏಕೈಕ ಕೊರತೆ ಅಂದರೆ 160 ನಿಮಿಷಗಳ ಅವಧಿ. ಇದನ್ನು 20 ನಿಮಿಷದಷ್ಟೂ ತಗ್ಗಿಸಬಹುದಿತ್ತು. ಚಿತ್ರದ ಮೊದಲಾರ್ಧದಲ್ಲಿ ಕೆಲವು ಅನಾವಶ್ಯಕ ಅಂಶಗಳು ಎದ್ದು ಕಾಣುತ್ತದೆ. ಒಟ್ಟಿನಲ್ಲಿ ‘ಕವಚ’ ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಸಿನಿಮಾ.

For All Latest Updates

TAGGED:

ABOUT THE AUTHOR

...view details