ಭಾರತೀಯ ಚಿತ್ರ ರಂಗದಲ್ಲಿ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಚಿರಪರಿಚಿತ. ಇದಕ್ಕೆ ಕಾರಣ ರಮಾನಂದ್ ಸಾಗರ್ ಹಾಗೂ ಬಿ.ಆರ್. ಚೋಪ್ರಾ. ಇವರು ಧಾರಾವಾಹಿ ಮೂಲಕ ಇವೆರಡೂ ಮಹಾನ್ ಗ್ರಂಥಗಳನ್ನು ಮನೆ ಮನೆಗೂ ತಲುಪಿಸಿದವರು. ಅದಕ್ಕೂ ಮುಂಚೆ ದಕ್ಷಿಣ ಭಾರತದಲ್ಲಿ ಹಲವಾರು ಪೌರಾಣಿಕ ಸಿನಿಮಾಗಳು ರಾಮಾಯಣ ಹಾಗೂ ಮಹಾಭಾರತ ಆಧರಿಸಿ ಬಂದಿವು.
ಈಗ ಬಂದಿರುವ ‘ಕುರುಕ್ಷೇತ್ರ’ ಸಿನಿಮಾದ ಏಕೈಕ ಹೆಗ್ಗಳಿಕೆ ಅಂದರೆ ಅದಕ್ಕೆ ಬಳಸಿರುವ ತಂತ್ರಜ್ಞಾನ. ಕಥೆ ವಿಚಾರದಲ್ಲಿ ಬದಲಾವಣೆ ಅಸಾಧ್ಯ. ಆದರೆ, ಈ ಚಿತ್ರದಲ್ಲಿ ದುರ್ಯೋಧನ ಕೇಂದ್ರೀಕೃತ ‘ಕುರುಕ್ಷೇತ್ರ’ ತೆರೆಯ ಮೇಲೆ ಬಹಳ ದೊಡ್ಡ ರೀತಿಯಲ್ಲಿ ಅದರಲ್ಲೂ 3ಡಿ ತಂತ್ರಜ್ಞಾನದಲ್ಲಿ ತಂದಿರುವುದು ಭಾರತೀಯ ಚಿತ್ರ ರಂಗಕ್ಕೆ ಕನ್ನಡ ನಾಡಿನ ಕೊಡುಗೆ ಅಂತಾ ಹೇಳಬಹುದು.
ಪೌರಾಣಿಕ ಕಥಾ ವಸ್ತು ಆಯ್ಕೆ ಮಾಡಿಕೊಂಡ ಮೇಲೆ ಅದಕ್ಕೆ ತಕ್ಕುದಾದ ಪಾತ್ರ ಪೋಷಣೆ ಬಹಳ ಅತ್ಯಗತ್ಯ. ಅದೇ ಈ ಚಿತ್ರದಲ್ಲಿ ಆಗದೆ ಇರುವ ವಿಚಾರ. ದುರ್ಯೋಧನ, ಭೀಮ, ಶಕುನಿ, ಕರ್ಣ, ದ್ರೋಣಾಚಾರ್ಯ, ಧರ್ಮರಾಯ, ಅಭಿಮನ್ಯು ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸರಿಯಾಗಿದ್ದು ಬಿಟ್ಟರೆ ಮಿಕ್ಕ ಪಾತ್ರಗಳ ನಟರುಗಳು ಹೊಂದಾಣಿಕೆ ಆಗುವುದೇ ಇಲ್ಲ. ಆದರೆ ತಂತ್ರಗಾರಿಕೆ ಭೇಷ್ ಅನ್ನಲೆ ಬೇಕು.
ಸುಯೋಧನ (ದರ್ಶನ್) ಆಧರಿಸಿ ಇಲ್ಲಿ ಎಲ್ಲವೂ ಹೇಳಲಾಗಿದೆ. ಆತನ ಆಟ್ಟಹಾಸ, ಪರಾಕ್ರಮ, ಶತಗಜ ಶಕ್ತಿ ಕೊಂಡಾಡುವಿಕೆ ಹೆಚ್ಚು ಆಗಿದೆ. ಈ ಪಾತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಯ ವಾಚಾ ಮನಸಾ ನಿಭಾಯಿಸಿದ್ದಾರೆ. ಇನ್ಮುಂದೆ ಇಂತಹುದೇ ಗಟ್ಟಿಯಾದ ಪಾತ್ರಗಳು ಅವರು ಆಯ್ಕೆ ಮಾಡಿಕೊಂಡು ಗೆಲ್ಲಬಹುದು.
ಕೌರವರು ಹಾಗೂ ಪಾಂಡವರ ಸಭೆಯೊಂದಿಗೆ ‘ಮುನಿರತ್ನ ಕುರುಕ್ಷೇತ್ರ’ ಪಿತಾಮಹ ಭೀಷ್ಮ ಅವರಿಂದ ಪ್ರಾರಂಭವಾಗುತ್ತೆ. ಅಲ್ಲಿಂದ ಕರ್ಣನ ಆಗಮನ ಸಹ ಆಗುತ್ತದೆ. ಆಪ್ತ ಸ್ನೇಹಿತ ಆಗಿ ಒಂದು ರಾಜ್ಯವನ್ನೂ ಸಹ ದುರ್ಯೋಧನ ಅವನಿಗೆ ಕೊಟ್ಟು ತನ್ನ ಪಕ್ಕಕ್ಕೆ ಕೂರಿಸಿಕೊಳ್ಳುತ್ತಾನೆ. ಇದೆ ಸಭೆಯಲ್ಲಿ ಭೀಷ್ಮ ಹೇಳಿದ ಮಾತು ಧರ್ಮರಾಯ ರಾಜನಾಗಬೇಕು ಎಂಬುದನ್ನು ದುರ್ಯೋಧನ ಒಪ್ಪುವುದಿಲ್ಲ.