ರಾಜಾ.ಬಿ, ಶೆಟ್ಟಿ ಹಾಗೂ ವರ್ಜೀನಿಯ ರೊಡ್ರಿಗೀಸ್ ನಟಿಸಿರುವ ಮಹಿರ ಚಿತ್ರ ಇಂದು ತೆರೆಕಂಡಿದ್ದು, ಇದರ ವಿಮರ್ಶೆ ಇಲ್ಲಿದೆ ನೋಡಿ.
ಮಾಯಾ (ವರ್ಜೀನಿಯ ರೊಡ್ರಿಗೀಸ್) ಹಾಗೂ ಅವರ ಮಗಳು ಆದ್ಯ (ಚೈತ್ರ ಆಚಾರ್) ಕಡಲ ತೀರದ ಬಳಿ ಹೊಟೇಲ್ ನಡೆಸುತ್ತಿರುತ್ತಾರೆ. ಇವರ ನೆಮ್ಮದಿಗೆ ಭಂಗ ಬರುವುದು ಫೇಸ್ ಬುಕ್ ಅಲ್ಲಿ ಆದ್ಯ ಕಾಲೇಜಿನ ಹುಡುಗನಿಗೆ ಹೊಡೆದ ಸನ್ನಿವೇಶದಿಂದ. ಆದ್ಯ ಕಾಲೇಜಿನಲ್ಲಿ ಬಜಾರಿ ಹುಡುಗಿ. ಅವಳ ಬಜಾರಿತನ ಪತ್ರಿಕೆಯಲ್ಲೂ ಪ್ರಕಟ ಆಗುವಾಗ ಅವಳ ಅಮ್ಮ ಮಾಯಾ ಫೋಟೋ ಸಹ ಅಚ್ಚಾಗುವುದು. ಆಗ ಗೊತ್ತಾಗುವುದೇ ಈ ಮಾಯಾ ಬೇರಾರೂ ಅಲ್ಲ ಅಂಡರ್ ಕವರ್ ಏಜೆಂಟ್ ಇಂಡಿಯ ಇಂಟೆಲಿಜೆನ್ಸ್ ವಿಭಾಗದಲ್ಲಿ ದೇವಕಿ ಆಗಿ ದೊಡ್ಡ ಹೆಸರು ಮಾಡಿರುವ ವ್ಯಕ್ತಿ ಎಂದು.
ಟೆರರಿಸ್ಟ್ ಜಾಲ ಭೇದಿಸುವಾಗ ತೌಸಿಫ್ ಬಳಿ ಇರುವ ಅಮೂಲ್ಯವಾದ ಮಾಹಿತಿ ಪಡೆದಿದ್ದಾಳೆ ಎಂದು ಅವಳ ಸಂಸ್ಥೆಯ ತಿಳಿವಳಿಕೆ. ಆದರೆ, ವಿಚಾರ ಬೇರೇನೆ ಇರುತ್ತದೆ. ದೇವಕಿ ಹಾಗೂ ಅವರ ಪತಿ ಕಿಶೋರ್ (ದಿಲೀಪ್ ರಾಜ್) ಮಾಡುವ ದೊಡ್ಡ ಸಾಹಸದಲ್ಲಿ ತೌಸಿಫ್ ಕಡೆಯವರು ಕಿಶೋರ್ ಅನ್ನು ಹತ್ಯೆ ಮಾಡಿದಾಗ, ದೇವಕಿ ತೌಸಿಫ್ನನ್ನು ಮುಗಿಸುತ್ತಾಳೆ. ಆದರೆ, ಅವರ ಡಿಪಾರ್ಟ್ಮೆಂಟ್ ವ್ಯಕ್ತಿಗಳು ತೌಸಿಫ್ ನಿಂದ ದೇವಕಿ ಅಮೂಲ್ಯವಾದ ಡಾಟಾ ಪಡೆದಿದ್ದಾಳೆ ಎಂದು ತಿಳಿದುಕೊಳ್ಳುತ್ತಾರೆ. ಅತ್ತ ಕಡೆ ಟೆರರಿಸ್ಟ್ ಗುಂಪು ಸಹ ದೇವಕಿ ಮೇಲೆ ಸೇಡು ತಿರಿಕೊಳ್ಳಲು ಹೊಂಚು ಹಾಕುತ್ತಿರುತ್ತದೆ.
ದೇವಕಿ ಕೆಲವು ವರ್ಷಗಳು ಕಣ್ಮರೆಯಾಗಿ ನೆಮ್ಮದಿಯ ಜೀವನಕ್ಕೆ ಮುಂದಾಗಿರುವಾಗ ಅವಳ ಫೋಟೋ ಪತ್ರಿಕೆಯಲ್ಲಿ ಬರುವುದು ಎಲ್ಲ ಯಡವಟ್ಟಿಗೆ ಕಾರಣ ಆಗುತ್ತದೆ. ಬೆಳದ ಮಗಳು ಆದ್ಯ ಜೊತೆ ಅವಳಿಗೆ ದಾರೀನೇ ಇಲ್ಲದ ಜೀವನ. ದೇವಕಿ ಅಲಿಯಾಸ್ ಮಾಯಾ ಈಗ ತನ್ನ ಮೇಲಿರುವ ಆರೋಪವನ್ನು ಸರಿಗಟ್ಟಬೇಕು. ಆಗ ದೇವಕಿ ರಕ್ಷಣೆಗೆ ಬರುವುದೇ ಪ್ರತಾಪ್ (ರಾಜ್.ಬಿ. ಶೆಟ್ಟಿ). ತನ್ನ ಮೇಲಧಿಕಾರಿಯೇ ಮಾಡುತ್ತಿರುವ ಕೃತ್ಯವನ್ನು ತನ್ನದೇ ಆದ ರೀತಿಯಲ್ಲಿ ಪ್ರತಾಪ್ ಲೆಕ್ಕ ಹಾಕುವುದು ದೇವಕಿ ದಾರಿಗೆ ಸ್ವಲ್ಪವಾದರೂ ರಕ್ಷಣೆ ಸಿಕ್ಕುತ್ತದೆ.
ದೇವಕಿ ತನ್ನ ಬಳಿ ಇಲ್ಲದೇ ಇರುವ ಅಮೂಲ್ಯವಾದ ಡೇಟಾ ಹೇಗೆ ಪಡೆಯುತ್ತಾಳೆ, ಒಂದು ಕಡೆ ಟೆರರಿಸ್ಟ್ ಹಾಗೂ ತನ್ನ ಸಂಸ್ಥೆಯ ವಿರೋಧ ಕಟ್ಟಿಕೊಂಡಿರುವುದನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನೂ ನೀವು ತೆರೆಯ ಮೇಲೆ ನೋಡಬಹುದು.
ಮೊದಲ ಕನ್ನಡ ಚಿತ್ರದಲ್ಲಿ ವರ್ಜೀನಿಯ ರೊಡ್ರಿಗೀಸ್ ಕಷ್ಟ ಪಟ್ಟಿದ್ದಾರೆ. ತಮ್ಮ ಪಾತ್ರವನ್ನು ಅರ್ಥ ಮಾಡಿಕೊಂಡು ಹೊಡೆದಾಟದ ಸನ್ನಿವೇಶಗಳು ಸಖತ್ ಆಗಿ ನಿರ್ವಹಿಸಿದ್ದಾರೆ. ಅವರ ವಯಸ್ಸಿಗೆ ತಕ್ಕ ಪಾತ್ರ. ಸಾಹಸ ನಿರ್ದೇಶಕ ಚೇತನ್ ದಿ ಸೌಜ ಕೆಲಸ ಬಹಳ ಅಚ್ಚುಕಟ್ಟಾಗಿದೆ. ಮಾಲಾಶ್ರೀ, ರಾಗಿಣಿ, ಆಯೇಷಾ ನಂತರ ಮತ್ತೊಬ್ಬ ಆ್ಯಕ್ಷನ್ ಹೀರೋಯಿನ್ ಸ್ಥಳಕ್ಕೆ ವರ್ಜೀನಿಯ ಜಾಗ ಮಾಡಿಕೊಂಡಿದ್ದಾರೆ. ಇವರ ಎತ್ತರ ಹಾಗೂ ಮೈಕಟ್ಟು ಪಾತ್ರಕ್ಕೆ ಸಹಕರಿಸಿದೆ.