'ಒಂದು ಮೊಟ್ಟೆ ಕಥೆ' ಖ್ಯಾತಿಯ ರಾಜ್ ಬಿ. ಶೆಟ್ಟಿ ಅಭಿನಯದ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾ ಇಂದು ಬಿಡುಗಡೆಯಾಗಿದೆ. ಮೊಟ್ಟೆ ಕಥೆ ಸಿನಿಮಾದಲ್ಲಿ ನಾಯಕನಿಗೆ ತಲೆಯಲ್ಲಿ ಕೂದಲು ಇಲ್ಲದೆ ಮದುವೆಗೆ ಹೆಣ್ಣು ಸಿಗುವುದು ಸಮಸ್ಯೆಯಾಗಿತ್ತು. ಈ ಸಿನಿಮಾದಲ್ಲಿ ಕೂಡಾ ಅದೇ ಸಮಸ್ಯೆ ಮುಂದುವರೆದಿದೆ.
ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುವ ವೆಂಕಟಕೃಷ್ಣ ಗುಬ್ಬಿ (ರಾಜ್ ಬಿ.ಶೆಟ್ಟಿ)ಗೆ 1.30 ಲಕ್ಷ ಸಂಬಳ. ಆದರೆ ಯಾವ ಹುಡುಗಿ ಕೂಡಾ ಇವನಿಗೆ ಸೆಟ್ ಆಗುವುದಿಲ್ಲ. ಇವನ ಆಪ್ತ ಸ್ನೇಹಿತ ನಾಣಿ (ಸುಜಯ್ ಶಾಸ್ತ್ರಿ) ವಿಚಿತ್ರ ಸ್ವಭಾವದವನು. ಸ್ನೇಹಿತನ ಮದುವೆಗೆ ಅಡ್ಡಗಾಲು ಹಾಕುತ್ತಿರುತ್ತಾನೆ. ಆದರೆ ಅದನ್ನು ಮೀರಿ ಗುಬ್ಬಿ ಮದುವೆ ಪರ್ಪಲ್ ಪ್ರಿಯ (ಕವಿತಾ ಗೌಡ) ಜೊತೆ ನಿಶ್ಚಯ ಆಯ್ತು ಎನ್ನುವ ವೇಳೆಗೆ ಆಕೆಯ ಕಿಡ್ನಾಪ್ ಆಗುತ್ತದೆ. ರಾಬಿನ್ ಹುಡ್ (ಪ್ರಮೋದ್ ಶೆಟ್ಟಿ) ಗುಬ್ಬಿ ಪ್ರಿಯತಮೆಯನ್ನು ಅಪಹರಿಸಿರುತ್ತಾನೆ. ಆಕೆಯನ್ನು ಬಿಟ್ಟುಕಳಿಸಲು ಗುಬ್ಬಿ ಬಳಿ ಒಂದು ಷರತ್ತು ಹಾಕುತ್ತಾನೆ. ಆ ಊರಿನ ದೊಡ್ಡ ರೌಡಿ (ಶೋಭರಾಜ್) ಮಗಳನ್ನು ಗುಬ್ಬಿ ಕಿಡ್ನಾಪ್ ಮಾಡಿದರೆ, ಪರ್ಪಲ್ ಪ್ರಿಯಳನ್ನು ಬಿಡುವುದಾಗಿ ಹೇಳುತ್ತಾನೆ. ಆದರೆ ಇದು ಬಹಳ ಕಷ್ಟದ ಕೆಲಸ. ರಾಬಿನ್ ಹುಡ್ ಹೇಳಿದಂತೆ ಗುಬ್ಬಿ ರೌಡಿಯ ಮಗಳನ್ನು ಕಿಡ್ನಾಪ್ ಮಾಡುವನೇ..? ತನ್ನ ಪ್ರಿಯತಮೆಯನ್ನು ಮರಳಿ ಪಡೆಯುವನೇ ಎಂಬುದು ಚಿತ್ರದ ಕಥೆ.