ಬಹುತೇಕ ಸಿನಿಮಾಗಳು ಬಿಡುಗಡೆಯಾಗುವುದು ಶುಕ್ರವಾರದ ದಿನ. ಆದರೆ ಕೆಲವೊಂದು ಸಿನಿಮಾಗಳು ವಿಶೇಷ ದಿನಗಳಂದು ಬಿಡುಗಡೆಯಾಗುತ್ತವೆ. ಆಗಸ್ಟ್ 15 ರಂದು ಸ್ವಾತಂತ್ಯ್ರ ದಿನ ಹಾಗೂ ರಕ್ಷಾಬಂಧನದ ಅಂಗವಾಗಿ 'ಗಿಮಿಕ್' ಕನ್ನಡ ಸಿನಿಮಾ ಸೇರಿ ಬಹುತೇಕ ಸಿನಿಮಾಗಳು ಬಿಡುಗಡೆಯಾಗಿವೆ. ದೀಪಕ್ ಸಾಮಿ ನಿರ್ಮಾಣದ ಈ ಸಿನಿಮಾವನ್ನು ನಾಗಣ್ಣ ನಿರ್ದೇಶಿಸಿದ್ದಾರೆ.
ನಿರ್ದೇಶಕ ನಾಗಣ್ಣ ಹಳೆ ಮಧ್ಯವನ್ನು ಹೊಸ ಬಾಟಲಿಯಲ್ಲಿ ತುಂಬಿ ನೀಡಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕ್ಲೈಮ್ಯಾಕ್ಸ್. ‘ಆಪ್ತಮಿತ್ರ’ ಚಿತ್ರವನ್ನು ಈ ಸಿನಿಮಾ ನೆನಪಿಸುತ್ತದೆ. ಇದು 2016 ರಲ್ಲಿ ಬಿಡುಗಡೆಯಾದ ‘ದಿಲ್ಲುಕ್ಕು ದುಡ್ಡು‘ ಚಿತ್ರದ ರೀಮೇಕ್. ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಹಾರರ್ ಹಾಗೂ ಥ್ರಿಲ್ಲರ್ ಕಥಾ ವಸ್ತುವನ್ನು ಆರಿಸಿಕೊಂಡು ತಮಿಳಿನಲ್ಲಿ ಸಂತಾನಮ್ ಮಾಡಿದ ಪಾತ್ರವನ್ನು ಮಾಡಿದ್ದಾರೆ. ಕಥೆ ಮೊದಲಾರ್ಧದಲ್ಲಿ ಸ್ವಲ್ಪ ತಮಾಷೆ, ದ್ವಿತೀಯಾರ್ಧದಲ್ಲಿ ಹಾರರ್ ಹಾಗೂ ಥ್ರಿಲ್ ನೀಡುತ್ತದೆ.
ಅವನು ಗಣಿ (ಗಣೇಶ್) ಅವಳು ರಾಣಿ (ರೋನಿಕ) ಇವರಿಬ್ಬರ ಮಧ್ಯೆ ಬಡತನ ಹಾಗೂ ಶ್ರೀಮಂತಿಕೆ ಅಡ್ಡವಾಗಿದೆ. ಆದರೂ ಮಗಳು ರಾಣಿ ಬಡವನನ್ನು ಒಪ್ಪಿಕೊಂಡಳಲ್ಲ ಎಂದು ಕೋಪಗೊಂಡ ಅಪ್ಪ (ಚಿ. ಗುರುದತ್) ಒಂದು ಷಡ್ಯಂತ್ರವನ್ನು ಹೂಡುತ್ತಾನೆ. 40 ವರ್ಷಗಳಿಂದ ಬಾಗಿಲು ತೆಗೆಯದ ಬಂಗಲೆ ಒಳಗೆ ನಾಯಕ ಗಣಿ ಕುಟುಂಬ ಬರುವಂತೆ ಮಾಡುತ್ತಾನೆ. ಅದೇ ಜಾಗಕ್ಕೆ ಮತ್ತೊಂದು ತಂಡವನ್ನು ಕಳಿಸಿ ದೆವ್ವದ ಚೇಷ್ಟೆ ಮೂಲಕ ಇಡೀ ಕುಟುಂಬವನ್ನು ನಿರ್ನಾಮ ಮಾಡುವುದು ನಾಯಕಿ ಅಪ್ಪನ ಸಂಚು. ಆದರೆ ಆ ಬಂಗಲೆಯಲ್ಲಿ ಅಸಲಿ ದೆವ್ವ ಒಂದು ಪೆಟ್ಟಿಗೆಯಲ್ಲಿ ಬಂಧಿತವಾಗಿರುತ್ತದೆ. ಶೋಭರಾಜ್ ಹಾಗೂ ತಂಡ ನಕಲಿ ದೆವ್ವದ ನಾಟಕ ಆಡುವ ವೇಳೆ ಅಸಲಿ ದೆವ್ವ ಪೆಟ್ಟಿಗೆಯಿಂದ ಹೊರಬಂದು ಪರಿಸ್ಥಿತಿ ಸಂದಿಗ್ಧವಾಗುತ್ತದೆ. ನಾಯಕಿ ಸಾವು-ಬದುಕಿನ ಹೋರಾಟದಲ್ಲಿರುವಾಗ ನಾಯಕ ದೊಡ್ಡ ಸಾಹಸಕ್ಕೆ ಮುಂದಾಗುತ್ತಾನೆ. ದೆವ್ವದ ಶಕ್ತಿಯಿಂದ ಬಂಧಿಯಾಗುವ ನಾಯಕ ಕೊನೆಗೆ ಹೇಗೆ ಅದರಿಂದ ಪಾರಾಗುತ್ತಾನೆ. ತನ್ನ ಪ್ರೀತಿಯನ್ನು ವಾಪಸ್ ಪಡೆಯುತ್ತಾನಾ ಎಂಬುದನ್ನು ತಿಳಿಯಲು ನೀವು ಥಿಯೇಟರ್ಗೆ ಹೋಗಬೇಕು.
‘ಗಿಮಿಕ್’ ಹೆಸರಿಗೆ ತಕ್ಕಂತೆ ಅಲ್ಲಲ್ಲಿ ಪ್ರೇಕ್ಷಕರಿಗೆ ಚಮಕ್ ನೀಡುತ್ತದೆ. ದುಡ್ಡು, ದ್ವೇಷಕ್ಕಿಂತ ಮಾನವೀಯತೆ ಮುಖ್ಯ ಎಂಬುದನ್ನು ಕೂಡಾ ಸಿನಿಮಾದಲ್ಲಿ ಹೇಳಲಾಗಿದೆ. ಗಣೇಶ್ಗೆ ಇಲ್ಲಿ ಪಟಪಟ ಮಾತಿದೆ, ಸಾಹಸ ದೃಶ್ಯವಿದೆ, ರೋನಿಕಾ ಸಿಂಗ್ ಜೊತೆ ರೊಮಾನ್ಸ್ ಮಾಡಿದ್ದಾರೆ. ಇನ್ನು ರೋನಿಕಾ ಸಿಂಗ್ ಮೊದಲ ಪ್ರಯತ್ನದಲ್ಲಿ ಗಮನ ಸೆಳೆಯುವುದಕ್ಕೆ ಕಾರಣ ಅವರ ಮುದ್ದು ಮುಖ. ಪೋಷಕರಲ್ಲಿ ಶೋಭರಾಜ್ ಹೆಚ್ಚು ಗಮನ ಸೆಳೆಯುತ್ತಾರೆ. ಚಿ. ಗುರುದತ್ (ಚಿ.ಉದಯಶಂಕರ್ ಅವರ ಮಗ), ಮಂಡ್ಯ ರಮೇಶ್, ಸುಂದರ್ ರಾಜ್, ರವಿಶಂಕರ್ ಗೌಡ ಅವರು ಹಾಸ್ಯದ ದೃಶ್ಯಗಳಲ್ಲಿ ಭೇಷ್ ಎನಿಸಿಕೊಳ್ಳುತ್ತಾರೆ. ಅರ್ಜುನ್ ಜನ್ಯ ಅವರ ಎರಡು ಹಾಡುಗಳು ಗುನುಗುವಂತಿದೆ. ಛಾಯಾಗ್ರಾಹಕ ವಿಜ್ಞೇಶ್ ಅವರ ನೈಟ್ ಎಫೆಕ್ಟ್ ದೃಶ್ಯಗಳು ಮತ್ತು ಹಿನ್ನೆಲೆ ಸಂಗೀತ ಕೂಡಾ ಗಮನ ಸೆಳೆಯುತ್ತದೆ. ಆದರೆ ಚಿತ್ರದ ಅವಧಿ ಹೆಚ್ಚಾಯಿತು ಎನ್ನಿಸುತ್ತದೆ. ಒಟ್ಟಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಸಿನಿಮಾ ಮೆಚ್ಚುಗೆ ಆಗುವುದರಲ್ಲಿ ಸಂದೇಹವಿಲ್ಲ.