ಬಹುನಿರೀಕ್ಷಿತ, ಬಹುಕೋಟಿ ವೆಚ್ಚದ ಕಿಚ್ಚ ಸುದೀಪ್ ಅವರ ಪ್ಯಾನ್ ಇಂಡಿಯಾ ಸಿನಿಮಾ 'ಪೈಲ್ವಾನ್' ಇಂದು ಬಿಡುಗಡೆಯಾಗಿದೆ. ಈ ಸಿನಿಮಾ ಅಭಿನಯ ಚಕ್ರವರ್ತಿ ಅಭಿಮಾನಿಗಳ ಪಾಲಿಗೆ ಹಬ್ಬದೂಟ ಎಂದರೆ ತಪ್ಪಾಗುವುದಿಲ್ಲ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾಹಸ, ಸೆಂಟಿಮೆಂಟ್, ಕಾಮಿಡಿ, ಪ್ರೀತಿ, ತ್ಯಾಗ....ಹೀಗೆ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲಾ ಸರಕನ್ನು ನಿರ್ದೇಶಕ ಎಸ್.ಕೃಷ್ಣ 'ಪೈಲ್ವಾನ್' ಚಿತ್ರದಲ್ಲಿ ಒದಗಿಸಿದ್ದಾರೆ. ಪ್ರತಿ ದೃಶ್ಯವೂ ಶ್ರೀಮಂತವಾಗಿ ಕಾಣಲು ಅದಕ್ಕೆ ತಕ್ಕಂತೆ ತಾಂತ್ರಿಕ ಸ್ಪರ್ಶ ನೀಡಲಾಗಿದೆ. ಯಾವುದೇ ಕಲಾವಿದನಾಗಲೀ ಶ್ರದ್ಧೆಯನ್ನು ಧಾರೆ ಎರೆಯಬೇಕು ಎಂಬುದಕ್ಕೂ ಕಿಚ್ಚ ಸುದೀಪ್ ಉದಾಹರಣೆಯಾಗಿ ನಿಲ್ಲುತ್ತಾರೆ. ಸುದೀಪ್ ಸಿನಿಮಾ ಕರಿಯರ್ನಲ್ಲಿ ಅತ್ಯಂತ ಶ್ರಮ ವಹಿಸಿದ ಚಿತ್ರ ಇದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಅನಾಥ ಹುಡುಗ ಕೃಷ್ಣ (ಸುದೀಪ್)ನ ಕಿಚ್ಚನ್ನು ನೋಡಿದ ಗಜೇಂದ್ರಗಢ್ ಎಂಬ ಊರಿನ ಸರ್ಕಾರ್ (ಸುನಿಲ್ ಶೆಟ್ಟಿ) ಆ ಹುಡುಗನನ್ನು ತನ್ನ ಗರಡಿಯಲ್ಲಿ ಬೆಳೆಸುತ್ತಾನೆ. ಚೂಟಿ ಹುಡುಗ ಕೃಷ್ಣ ತನ್ನ ಜೀವನವನ್ನು ಸರ್ಕಾರ್ ಸೇವೆಗೆ ಮುಡುಪಾಗಿಡುತ್ತಾನೆ. ಕೃಷ್ಣ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಹೆಸರು ಮಾಡಬೇಕು ಎನ್ನುವುದು ಸರ್ಕಾರ್ ಮಹದಾಸೆ. ಆದರೆ ಇದಕ್ಕೆ ಕೃಷ್ಣನಿಗೆ ಪ್ರೇಯಸಿ ರುಕ್ಮಿಣಿ (ಆಕಾಂಕ್ಷ ಸಿಂಗ್), ರಾಣಾ ( ಸುಶಾಂತ್ ಸಿಂಗ್) ಇಬ್ಬರೂ ಅಡ್ಡಗಾಲಾಗುತ್ತಾರೆ. ರುಕ್ಮಿಣಿಯನ್ನು ಕೃಷ್ಣ ವಿವಾಹವಾಗುವುದು ಸರ್ಕಾರ್ಗೆ ಇಷ್ಟವಿರುವುದಿಲ್ಲ. ಈ ಕಾರಣಕ್ಕೆ ಕೃಷ್ಣ ಊರನ್ನೇ ಬಿಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಸರ್ಕಾರ್ ಕಲಿಸಿದ ವಿದ್ಯೆಯನ್ನು ನಾನು ಎಂದಿಗೂ ಉಪಯೋಗಿಸುವುದಿಲ್ಲ ಎಂದು ಕೃಷ್ಣ ಭಾಷೆ ನೀಡಿ ಅಲ್ಲಿಂದ ಹೊರಡುತ್ತಾನೆ. ಅಲ್ಲಿಂದ ಮುಂದೆ ಸಿನಿಮಾ ಒಂದು ತಿರುವು ಪಡೆದುಕೊಳ್ಳುತ್ತದೆ.
ಇದು ಕಿಚ್ಚ ಸುದೀಪ್ ಅವರ ಇಮೇಜ್ಗೆ ಬಹಳ ಹೊಂದಿಕೊಳ್ಳುವ ಸಿನಿಮಾ. ಸಾಹಸ, ಸೆಂಟಿಮೆಂಟ್, ಕಾಮಿಡಿ ಸನ್ನಿವೇಶ ಪ್ರತಿಯೊಂದರಲ್ಲೂ ಸುದೀಪ್ ಬಹಳ ಚೆನ್ನಾಗಿ ಅಭಿನಯಿದ್ದಾರೆ. ಸುನಿಲ್ ಶೆಟ್ಟಿ ಅಭಿನಯ ಈ ಚಿತ್ರದಲ್ಲಿ ತಣ್ಣನೆ ಗಾಳಿಯಂತೆ ಹಾದು ಹೋಗುತ್ತದೆ. ನಾಯಕಿ ಆಕಾಂಕ್ಷ ಸಿಂಗ್ ಸುದೀಪ್ ಎತ್ತರಕ್ಕೆ ಮ್ಯಾಚ್ ಆಗುತ್ತಾರೆ ಮತ್ತು ಕೊಟ್ಟ ಪಾತ್ರವನ್ನು ಸಲೀಸಾಗಿ ನಿಭಾಯಿಸಿದ್ದಾರೆ. ಅಪ್ಪಣ್ಣ ಕಾಮಿಡಿ ಇಷ್ಟ ಆಗುತ್ತದೆ. ಕಬೀರ್ ದುಹಾನ್ ಸಿಂಗ್ ಹಾಗೂ ಸುಶಾಂತ್ ಸಿಂಗ್ ಗುಡುಗು, ಶರತ್ ಲೋಹಿತಾಶ್ವ ಹಾಗೂ ಅವಿನಾಶ್ ಅವರ ಗಾಂಭೀರ್ಯದ ನಟನೆ ಕೂಡಾ ಮೆಚ್ಚುಗೆಯಾಗುತ್ತದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿಎರಡು ಹಾಡುಗಳನ್ನು ಮತ್ತೆ ಮತ್ತೆ ಕೇಳಬಹುದು. ಸಿನಿಮಾ ಹಿನ್ನೆಲೆ ಸಂಗೀತ ಜೋಡಣೆ ಸಮೃದ್ಧವಾಗಿದೆ. ತಾಂತ್ರಿಕವರ್ಗ ಚಪ್ಪಾಳೆ ಗಿಟ್ಟಿಸುವಂತ ದೃಶ್ಯಗಳನ್ನು ವೈಭವೀಕರಿಸಿದೆ. ಚಿತ್ರದ ಅವಧಿಯನ್ನು ಕಡಿಮೆ ಮಾಡಬಹುದಿತ್ತು ಎನ್ನಿಸುತ್ತದೆ. ಹೀಗೆ 'ಪೈಲ್ವಾನ್' ಸಿನಿರಸಿಕರಿಗೆ ಪಂಚಾಮೃತ ಎಂದರೆ ತಪ್ಪಿಲ್ಲ.