ಪಿ. ವಾಸು ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ 'ಆಯುಷ್ಮಾನ್ಭವ' ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಜನರು ಸಿನಿಮಾವನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ಇನ್ನು ಚಿತ್ರ ನೋಡಿ ಅಭಿಮಾನಿಗಳು ಫಿದಾ ಆಗಿರುವುದು ಗ್ಯಾರಂಟಿ.
ಎಂತ ದೊಡ್ಡ ಶ್ರೀಮಂತ ಆದರೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡರೆ ಮಾತ್ರ ನೆಮ್ಮದಿಯಾಗಿ ಬದುಕಲು ಸಾಧ್ಯ ಎಂಬ ಸಂದೇಶವನ್ನು ಪಿ. ವಾಸು ಚಿತ್ರದಲ್ಲಿ ತೋರಿಸಿದ್ದಾರೆ. ವಾಸು ಅವರ ಪಾತ್ರವರ್ಗದ ಆಯ್ಕೆ, ಚಿತ್ರಕ್ಕೆ ಬೇಕಾದ ಅದ್ಭುತ ಲೋಕೇಶನ್ ಹಾಗೂ ತಾಂತ್ರಿಕ ವರ್ಗ ನಿಜಕ್ಕೂ ಚಿತ್ರವನ್ನು ಗೆಲ್ಲಿಸಿದೆ ಎನ್ನಬಹುದು. ಇನ್ನು 'ಆಯುಷ್ಮಾನ್ಭವ' ಎಂಬ ಪದಕ್ಕೆ ಅರ್ಥ ಸಿಗುವುದು ಚಿತ್ರದ ಕೊನೆಯ ಸನ್ನಿವೇಶದಲ್ಲಿ.
ನಿಶ್ಚಿತಾರ್ಥ ಕಾರ್ಯಕ್ರಮ ಜರುಗಲಿರುವ ದೊಡ್ಡ ಕುಟುಂಬವೊಂದಕ್ಕೆ ನಾಯಕ ಕೃಷ್ಣನ ( ಶಿವರಾಜ್ಕುಮಾರ್) ಆಗಮನವಾಗುತ್ತದೆ. ಈತ ವಧು-ವರ, ಎರಡೂ ಕುಟುಂಬಗಳಿಗೆ ಸಂಬಂಧಿಸಿದ ವ್ಯಕ್ತಿಯಲ್ಲ. ಆದರೆ ನಿಶ್ಚಿತಾರ್ಥ ಮುಗಿಯುವುದರೊಳಗೆ ಮನೆಗೆ ಒಡೆಯ ಗೋಪಿ ( ಅನಂತ್ನಾಗ್) ಹೃದಯ ಗೆದ್ದಿರುತ್ತಾನೆ ಕೃಷ್ಣ. ಅದೇ ಮನೆಯಲ್ಲಿ ಲಕ್ಷ್ಮಿ ( ರಚಿತಾ ರಾಮ್) ಕೂಡಾ ಇರುತ್ತಾಳೆ. ಕೃಷ್ಣ ಯಾರು..? ಯಾವ ಕಾರಣಕ್ಕೆ ಆತ ಆ ಕುಟುಂಬಕ್ಕೆ ಬರುತ್ತಾನೆ..? ಕೃಷ್ಣ ಯಾರು ಎಂದು ತಿಳಿದ ನಂತರ ಆ ಕುಟುಂಬದ ಪ್ರತಿಕ್ರಿಯೆ ಏನು ಎಲ್ಲವನ್ನೂ ನೀವು ತೆರೆ ಮೇಲೆ ನೋಡಬೇಕು.
ಶಿವರಾಜ್ಕುಮಾರ್ ಅವರ ಭಾವನೆ ತುಂಬಿದ ಅಭಿನಯಕ್ಕೆ ಅಭಿಮಾನಿಗಳು ಮಾರುಹೋಗಿದ್ದಾರೆ. ಒಂದು ಸಂದರ್ಭದಲ್ಲಿ ರಚಿತಾ ರಾಮ್ ಅವರನ್ನು ಸಲಹುವಾಗ ಅವರಂತೂ ಥೇಟ್ ಅಣ್ಣಾವ್ರ ಹಾಗೆ ಕಂಗೊಳಿಸಿ ಭಾವನೆಗಳನ್ನೂ ಹೊರ ಹಾಕುತ್ತಾರೆ. ಅನಂತ್ ನಾಗ್ ಅಭಿನಯದ ಬಗ್ಗೆ ಎರಡು ಮಾತಿಲ್ಲ. ರಚಿತಾ ರಾಮ್ ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ರಮೇಶ್ ಭಟ್ ಕೇವಲ ಕಥಾ ನಾಯಕನ ಹಿಂದಿನ ಪರಿಚಯ ಮಾಡಿಸುವಲ್ಲಿ ಅವರ ಅಭಿನಯ ಚಾತುರ್ಯ ವ್ಯಕ್ತಪಡಿಸಿದ್ದಾರೆ. ಅನಂತ ವೇಲು, ಬಾಬು ಹಿರಣ್ಣಯ್ಯ, ಸುಂದರ್ ವೀಣ, ವೀಣಾ ಸುಂದರ್,ಅವಿನಾಶ್, ಯಶಸ್ ಶೆಟ್ಟಿ ಅಭಿನಯದಲ್ಲೂ ಕೂಡಾ ಪಕ್ವತೆ ಇದೆ.
'ಆಯುಷ್ಮಾನ್ಭವ' ಚಿತ್ರದ ದೃಶ್ಯ ಇದು ಗುರುಕಿರಣ್ ಅವರ 100 ಸಂಗೀತದ ಸಿನಿಮಾ. ಎರಡು ಹಾಡುಗಳು ಕೇಳಲು ಬಹಳ ಇಂಪಾಗಿವೆ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ ಕೂಡಾ ಕಣ್ಣಿಗೆ ಕಟ್ಟುವಂತಿದೆ. ಒಟ್ಟಿನಲ್ಲಿ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು.