70ರ ದಶಕದ ನಾಯಕ ನಟರುಗಳ ಮಕ್ಕಳ ಪೈಕಿ ಅಂಬರೀಶ್ ಅವರ ಪುತ್ರ ಮಾತ್ರ ರಜತ ಪರದೆ ಮೇಲೆ ವಿಜೃಂಭಿಸಲು ಬಾಕಿ ಇದ್ದದ್ದು. ಇದೀಗ ಅದು ಕೂಡ ಸಾಕಾರಗೊಂಡಿದೆ. ಅಮರ್ ಚಿತ್ರದಿಂದ ಅಭಿಷೇಕ್ ಅಂಬರೀಶ್ ಆಗಮನ ಆಗಿದೆ. ಇದು ಒಂದು ಪಕ್ಕ ಮನರಂಜನಾ ಚಿತ್ರವಾಗಿ, ಕುಟುಂಬ ಸಮೇತ ನೋಡುವಂತಾಗಿದೆ. ಅಭಿಷೇಕ್ ಅಂಬರೀಶ್ ಲೀಲಾ ಜಾಲವಾಗಿ ನಟಿಸಿದ್ದಾರೆ.
ಅಭಿ ಎತ್ತರದಲ್ಲಿ ದರ್ಶನ್, ಸುದೀಪ್, ಯಶ್ ಹಾಗೂ ರಕ್ಷಿತ್ ಶೆಟ್ಟಿ ಅವರನ್ನು ಮೀರಿಸುತ್ತಾರೆ. ಇವರದು 6 ಅಡಿ 4 ಇಂಚು ಹೈಟ್. ಅಭಿ ಅವರನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯೋದು, ಅದನ್ನು ದೊಡ್ಡ ಪರದೆಯ ಮೇಲೆ ತೋರಿಸೋದು ಸಹ ಒಂದು ಚಾಲೆಂಜ್ ಆಗಿತ್ತಂತೆ ನಿರ್ದೇಶಕ ನಾಗಶೇಖರ್ ಅವರಿಗೆ.
ಅಭಿಷೇಕ್ ಅವರಲ್ಲಿ ಅಭಿನಯದ ತಾಕತ್ತು ಸಹ ಇದೆ. ಸಾಹಸದ ಸನ್ನಿವೇಶಗಳಲ್ಲಿ ಬಲಭೀಮ. ಯಾಕೋ ರೊಮಾನ್ಸ್ ಅಂದರೆ ಸ್ವಲ್ಪ ಹಿಂಜರಿಕೆ ಇದೆ ಅನ್ನಿಸುತ್ತೆ. ಸಂಭಾಷಣೆಯಲ್ಲಿ ಮೊದಲ ಸಿನಿಮಾ ಆದ್ದರಿಂದ ಅಪ್ಪನ ಸಂಭಾಷಣೆ ಶೈಲಿ ಬೆರೆಸಿದ್ದಾರೆ. ಅದೇ ಈ ಚಿತ್ರದ ಜೀವಾಳ ಸಹ ಆಗಿದೆ.
ನಿರ್ದೇಶಕ ನಾಗಶೇಖರ್ ಕೂಡ ಒಳ್ಳೆಯ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲಾರ್ಧದಲ್ಲಿ ಅವರು ಪೈಸಾ ವಸೂಲಿಗೆ ಸಹಕರಿಸಿದ್ದಾರೆ. ದ್ವಿತೀಯಾರ್ಧದಲ್ಲಿ ನಾಯಕ ಸ್ಟೈಲ್ ಬದಲಾಗಿ ಅವನಲ್ಲಿರುವ ಭಾವುಕತೆ ಸಹ ಎದ್ದು ನಿಲ್ಲುವಂತೆ ಮಾಡಿದ್ದಾರೆ. ನಾಗಶೇಖರ್ ಅವರಿಗೆ ಕಮರ್ಷಿಯಲ್ ಸಿನಿಮಾದ ಆಳ, ಉದ್ದ, ಅಗಲ ಚೆನ್ನಾಗಿ ಗೊತ್ತಿದೆ. ಇವರು ಮಿಕ್ಸ್ ಮಾಡಿರುವ ನವರಸ ಪಾಕ ಎಲ್ಲೂ ಕೊರತೆ ಅನ್ನಿಸುವುದಿಲ್ಲ.
ಯಾರಿದು ಅಮರ್?
ಇನ್ನು ಚಿತ್ರಕಥೆಗೆ ಬರೋದಾದ್ರೆ, ಅಮರ್ ಹೈ ಸ್ಟೈಲ್ ಜೀವನ ನಡೆಸುತ್ತಿರುವ ಯುವಕ. ಪಬ್ಬು, ಕ್ಲಬ್ನಲ್ಲಿ ಕಾಲ ಕಳೆಯುವ ಹುಡುಗ. ಬೈಕ್ ಸ್ಟಂಟ್ ಅಂದ್ರೆ ಖುಷಿ. ಇವನ ಸ್ನೇಹಿತರ ಜೊತೆ ಸೇರಿ ಸಸ್ಯಗಳನ್ನು ಮಂಗಳೂರು, ಊಟಿ ಹಾಗೂ ಸುತ್ತಮುತ್ತ ನೆಡಬೇಕು ಎಂದಾಗ, ಮಣ್ಣಿನ ಉಂಡೆಯಲ್ಲಿ ಬೀಜ ಹುದುಗಿಸಿ ಅದರಿಂದ ಗಿಡ ನಡೆಯುವ ಯೋಚನೆ ಟೀಮ್ ಲೀಡರ್ ಬಾಬಿ (ತಾನ್ಯ ಹೋಪ್) ಸಹ ಇಷ್ಟ ಪಡುತ್ತಾಳೆ. ಆದರೆ, ಇವರಿಬ್ಬರಲ್ಲಿ ಪ್ರೇಮಾಂಕು ಆಗುವುದು ಅಮರ್ ಒಂದು ಜೀವವನ್ನು ಕಷ್ಟದಿಂದ ಪಾರು ಮಾಡಿದಾಗ. ಇವರ ರಸ್ತೆ ಪ್ರಯಾಣ ಬೈಕ್ ಬಳಸಿ ಅಂತ್ಯ ಆಗುವ ಹೊತ್ತಿಗೆ ಬಾಬಿ ಹಾಗೂ ಅಮರ್ ಪ್ರೀತಿಯಲ್ಲಿ ಧುಮುಕಿರುತ್ತಾರೆ. ಆದರೆ, ಯಾವಾಗ ಅಮರ್ ಹಾಗೂ ಬಾಬಿ ತಂದೆ (ದೇವರಾಜ್) ಭೇಟಿ ಆಗುವುದೊ, ಆಗ ಹಣದ ದರ್ಪ ತೋರುವ ವ್ಯಕ್ತಿಗೆ (ದೇವರಾಜ್) 50 ಕೋಟಿಗೆ ತನ್ನ ಪ್ರೇಯಸಿಯನ್ನು ಮಾರಿಬಿಡುತ್ತಾನೆ ಅಮರ್.
'ಮೈ ಲವ್ ಈಸ್ ಸೋಲ್ಡ್ ಫಾರ್ 50 ಕೋಟಿ' ಎನ್ನುವುದು ಬಾಬಿ ಜೀವನದಲ್ಲಿ ದೊಡ್ಡ ಸಂಚಲನ ಮೂಡಿಸುತ್ತದೆ. ನಾಯಕಿ ಬಾಬಿ, ಅಪ್ಪನ ಆಸೆಯಂತೆ ಆಗರ್ಭ ಶ್ರಿಮಂತನ ಸಹೋದರನ ಕೈ ಹಿಡಿದಾಗ ಆಗುವ ಅಪಘಾತ ಬಾಬಿ ಜೀವನದಲ್ಲಿ ಮತ್ತೆ ಕಷ್ಟದ ಕಾರ್ಮೋಡ ಸುತ್ತಿಕೊಳ್ಳುತ್ತದೆ. ಆಗಲೇ ಬಾಬಿ ಚರ್ಚ್ ಒಂದರಲ್ಲಿ ಸನ್ಯಾಸಿ ಆಗುವ ನಿರ್ಧಾರ ಮಾಡುವುದು. ಆ ಘಟನೆ ಏನು ಎಂಬುದನ್ನು ಚಿತ್ರಮಂದಿರದಲ್ಲಿ ಕುಳಿತೇ ನೋಡಬೇಕು.
ತನ್ನ ಪ್ರೇಯಸಿ ಸನ್ಯಾಸಿ ಆಗುವುದು ಅಮರ್ ಮನಸಿಗೆ ಘಾಸಿಯನ್ನುಂಟು ಮಾಡುತ್ತದೆ. ಆ ನೋವಿನಿಂದಲೇ ಸ್ವಿಡ್ಜ್ರ್ಗೆಲೆಂಡ್ಗೆ ಹೋಗ್ತಾರೆ. ಅಲ್ಲಿಂದ ಅವನ ಜೀವನದಲ್ಲಿ ಬಾಬಿ ಸಿಗುವಳೇ, ಅವಳು ಸಿಗುವುದಕ್ಕೆ ಯಾರು ಕಾರಣಿಕರ್ತರಾಗುತ್ತಾರೆ ಎಂಬುದು ನೀವು ತೆರೆಯ ಮೇಲೆ ನೋಡಬೇಕು.
ಇನ್ನು ಕನ್ನಡದಲ್ಲಿ ಮತ್ತೋರ್ವ 6 ಪ್ಲಸ್ ಎತ್ತರ ಇರುವ ನಾಯಕ ಅಬ್ಬರಿಸಿದ್ದಾನೆ. ಚಿತ್ರದಲ್ಲಿ ಅಂಬಿ ನೆರಳು ಅಗಾಧವಾಗಿ ಕಾಡುತ್ತದೆ. ಇವರ ಸಂಭಾಷಣೆಯಲ್ಲಿ ಅಂಬಿ ಛಾಯೆ ಎದ್ದು ಕಾಣುತ್ತದೆ. ಸಾಹಸ ದೃಶ್ಯಗಳಲ್ಲಿ ಪವರ್ಫುಲ್. ತಾನ್ಯ ಹೋಪ್ ಮತ್ತೋರ್ವ ಹೋಪ್ ಈ ಸಿನಿಮಾದಲ್ಲಿ. ಅಭಿನಯದ ಅವಕಾಶ ಚೆನ್ನಾಗಿಯೇ ಸಿಕ್ಕಿದೆ ಅದನ್ನು ತಾನ್ಯಾ ಸಖತ್ತಾಗಿ ಒಪ್ಪಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಜೋರು ಪಾಟು' ಹಾಡಿನಲ್ಲಿ ಕಾಣಿಸಿಕೊಂಡು, ಚಿತ್ರದ ಅಂತ್ಯದಲ್ಲಿ 'ಅಮರ್ ಜೀವನದಲ್ಲಿ ರಕ್ಷಾ ಕವಚ ಆಗಿ ನಿಲ್ಲುವುದಾಗಿ' ಹೇಳುವುದು ನಿಜ ಜೀವನಕ್ಕೂ ಹೊಂದಾಣಿಕೆ ಆಗುತ್ತದೆ.
ನಿರೂಪ್ ಭಂಡಾರಿ ಅವರದು ಒಂದು ಸಣ್ಣ ಪಾತ್ರ. ದೇವರಾಜ್ ಅವರಿಗೆ ಸಂಯಮದ ಪಾತ್ರ. ಸಾಧು ಕೋಕಿಲಾ ಹಾಗೂ ಚಿಕ್ಕಣ್ಣ ಅಭಿನಯ ಹೆಚ್ಚು ನಗೆ ಉಕ್ಕಿಸುತ್ತದೆ.
ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಸುಮಧುರ. ಅವುಗಳನ್ನು ಹಾಡಿರುವ ಸಂಜೀತ್ ಹೆಗ್ಡೆ, ಸೋನು ನಿಗಂ ಸಹ ಕೇಳುಗರಿಗೆ ಖುಷಿ ಕೊಡುತ್ತಾರೆ. ಅಂಬರೀಶ್ ಅವರ ಒಲವಿನ ಉಡುಗೊರೆ ಸಿನಿಮಾ ಶೀರ್ಷಿಕೆ ಗೀತೆಯ ತುಣುಕು ಇಲ್ಲಿ ಬಳಕೆ ಆಗಿದ್ದು, ಚಿತ್ರದ ಅಂತ್ಯದಲ್ಲಿ ಅಂಬರೀಶ್ ಅವರೇ ಪಿಯಾನೊ ಮುಂದೆ ಕುಳಿತು ಹೇಳುವುದು ಸಹ ಮನಸಿಗೆ ಟಚ್ ಆಗುತ್ತದೆ.
ಈ ಚಿತ್ರಕ್ಕೆ ಮತ್ತೊಂದು ಜೀವಾಳ ಅಂದ್ರೆ ಛಾಯಾಗ್ರಾಹಕ ಸತ್ಯ ಹೆಗ್ಡೆ. ಅಷ್ಟೊಂದು ರಮಣೀಯ ದೃಶ್ಯಗಳು ಕರ್ನಾಟಕದ ಭಾಗದಲ್ಲಿ ಸಿಕ್ಕರೆ, ಮತ್ತಷ್ಟು ಭಾಗದಲ್ಲಿ ಸ್ವಿಡ್ಜ್ರ್ಲ್ಯಾಂಡ್ ಹೊರಾಂಗಣ ದೃಶ್ಯಗಳು ಮನಸಿಗೆ, ಕಣ್ಣಿಗೆ ಆನಂದ ಉಂಟು ಮಾಡುತ್ತದೆ. ಚಿತ್ರದ ಆವಧಿಯಲ್ಲಿ ತಕರಾರು ಇಲ್ಲ. ಸಂಕಲನ ಓಕೆ, ವಸ್ತ್ರ ವಿನ್ಯಾಸ ಆಯ್ಕೆ ಸಹ ಮೆಚ್ಚುಗೆಗೆ ಅರ್ಹ. ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಅಮರ್ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.