ಕರ್ನಾಟಕ

karnataka

ETV Bharat / sitara

'ಅದಿ ಲಕ್ಷ್ಮಿಯ ಪುರಾಣ': ಇದು ಮುಲಾಜಿಲ್ಲದೆ ಮನೆ ಮಂದಿ ಕುಳಿತು ನೋಡುವ ಸಿನಿಮಾ - undefined

ಅದಿ ಲಕ್ಷ್ಮಿಯ ಪುರಾಣ

By

Published : Jul 19, 2019, 6:36 PM IST

ಇಂದು ತೆರೆಕಂಡಿರುವ 'ಆದಿಲಕ್ಷ್ಮಿ ಪುರಾಣ' ಮನೆ ಮಂದಿ ಕುಳಿತು ನೋಡುವ ಸಿನಿಮಾ. ಆದರೆ, ಪ್ರೇಕ್ಷಕ ಮೊದಲಾರ್ಧದ ನೀರಸ ನಿರೂಪಣೆ ಹೊಟ್ಟೆಗೆ ಹಾಕಿಕೊಳ್ಳಬೇಕು. ಕಾರಣ ನಿರ್ದೇಶಕಿ ಪ್ರಿಯ, ಚಿತ್ರದ ದ್ವಿತೀಯಾರ್ಧಕ್ಕೆ ಕೊಟ್ಟ ಗಮನವನ್ನು ಮೊದಲಾರ್ಧಕ್ಕೆ ಕೊಟ್ಟಿಲ್ಲ. ಇಲ್ಲಿ ರಾಧಿಕಾ ಯಶ್​ ಅವರ ಪಾತ್ರ ಪುರಂದರ ದಾಸರ ಒಂದು ಕೀರ್ತನೆಯನ್ನು ಜ್ಞಾಪಕಕ್ಕೆ ತರಿಸುತ್ತದೆ. 'ಅದೇ ಸುಳ್ಳು ನಮ್ಮಲ್ಲಿಲ್ಲ ವಯ್ಯಾ ಸುಳ್ಳೇ ನಮ್ಮನೆ ದೇವರು'... ಕಾರಣ ಚಿತ್ರದಲ್ಲಿ ಲಕ್ಷ್ಮಿ (ರಾಧಿಕಾ)ಯದು ಬರೀ ಸುಳ್ಳು ಹೇಳುವ ಪಾತ್ರ. ಅದು ಕಡೆ ಘಳಿಗೆವರೆಗೂ ಮುಂದುವರಿದಿದೆ.

ಹಾಗಾದರೆ 'ಆದಿ ಲಕ್ಷ್ಮಿ ಪುರಾಣ'ದ ಕಥೆ ಏನು? ನಾಯಕ ಆದಿ (ನಿರೂಪ್ ಭಂಡಾರಿ) ಡ್ರಗ್ ಮಾಫಿಯಾ ಜಾಲ ಭೇದಿಸಲು ಹೊರಟ ಪೊಲೀಸ್ ಅಧಿಕಾರಿ. ಡ್ರಗ್ ಸ್ಟಿಕರ್ ಯುವಕರನ್ನು ದಿಕ್ಕು ತಪ್ಪಿಸುತ್ತಿರುತ್ತದೆ. ಈ ಜಾಲದ ಬೇರು ಗೋವಾದಲ್ಲಿರುತ್ತೆ. ಅಲ್ಲಿಯ ಖದೀಮರನ್ನು ಸೆದೆಬಡಿಯುವುದು ಆದಿ ಕೆಲಸ.

ಇವುಗಳ ನಡುವೆ ಆದಿ ಮದುವೆಗೆ ಮನೆಯಲ್ಲಿ ಹುಡುಗಿ ಹುಡುಕುತ್ತಾ ಇರುತ್ತಾರೆ. ಆದರೆ, ಲಕ್ಷ್ಮಿ ಎಂಬ ಟ್ರಾವೆಲ್ ಏಜೆಂಟ್ ಕಂಪನಿಯಲ್ಲಿ ಕೆಲಸ ಮಾಡುವ ಮುದ್ದಾದ ಚೆಲುವೆ ಆದಿ ಕಣ್ಣಿಗೆಬೀಳುತ್ತಾಳೆ. ಆದರೆ ಲಕ್ಷ್ಮಿ ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಂಡು ಜೀವನದಲ್ಲಿ ಸದಾ ಸುಳ್ಳು ಹೇಳುತ್ತಿರುತ್ತಾಳೆ. ಅವಳ ಸುಳ್ಳು ಹೇಳುವ ಚಾಳಿ ಆದಿಗೆ ದೊಡ್ಡ ಮೈನಸ್ ಪಾಯಿಂಟ್. ಕಾರಣ ಲಕ್ಷ್ಮಿ ತನಗೆ ಮದುವೆ ಆಗಿದೆ ಎಂದು ಸುಳ್ಳು ಹೇಳಿರುತ್ತಾಳೆ.

ಇಲ್ಲಿಂದ ಕನ್ಫ್ಯೂಷನ್ ಶುರು ಆಗಿಬಿಡುತ್ತದೆ. ಆದಿ, ಲಕ್ಷ್ಮಿಯ ಸ್ವಂತ ಸಹೋದರನನ್ನು ತಪ್ಪು ತಿಳಿಯುತ್ತಾನೆ. ಅಲ್ಲಿಂದ ಮತ್ತಷ್ಟು ಪಾತ್ರಗಳು ದಾರಿ ತಪ್ಪುತ್ತವೆ. ಆದರೆ, ಪ್ರೇಕ್ಷಕರಿಗೆ ಗೊತ್ತು ನಿಜ ಏನು ಅಂತ. ಲಕ್ಷ್ಮಿಗೆ ಇದು ಹೀಗೆ ಮುಂದುವರಿದರೆ ತೊಂದರೆ ಅಂತ ಗೊತ್ತು. ಆದಿಗೂ ತನ್ನ ಮನಸ್ಸಿನಲ್ಲಿರುವ ದುಗುಡ ಹೇಳಿ ಬಿಡಬೇಕು ಅಂತ ಆತಂಕ. ಆಗಲೇ ನಿರ್ದೇಶಕರು ಚಿತ್ರವನ್ನೂ ಕ್ಲೈಮಾಕ್ಸ್ ಹಂತಕ್ಕೆ ತಂದು ನಿಲ್ಲಿಸುತ್ತಾರೆ. ಆದಿ ಲಕ್ಷ್ಮಿ ಹೇಗೆ ಒಪ್ಪಿ ಜೊತೆಯಾದರು, ಡ್ರಗ್ ಮಾಫಿಯಾ ಜಾಲವನ್ನು ಆದಿ ಹೇಗೆ ಭೇದಿಸುತ್ತಾನೆ ? ಎಂಬ ಕುತೂಹಲಕ್ಕೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ.

ಪ್ರೇಕ್ಷಕರನ್ನು ಈ ಆದಿ ಹಾಗೂ ಲಕ್ಷ್ಮಿ ಜೋಡಿ ಕೊನೆಯವರೆಗೂ ಕರೆದುಕೊಂಡು ಹೋಗುವಲ್ಲಿ ಪ್ರೇಕ್ಷಕನಿಗೆ ಅಲ್ಲಲ್ಲಿ ನಗು ತರಿಸುತ್ತಾರೆ. ಹಾಗೆ ಲಕ್ಷ್ಮಿ ಪಾತ್ರದ ಬಗ್ಗೆ ಕನಿಕರ ಸಹ ಉಂಟಾಗುತ್ತದೆ. ಆದಿಯನ್ನು ಕಂಡು ಒಂದೆಡೆ ಹೆಮ್ಮೆ ಅನ್ನಿಸಿದರೆ ಮತ್ತೊಮ್ಮೆ ಅಯ್ಯೋ ಪಾಪ ಅನ್ನಿಸಿಬಿಡುತ್ತದೆ. ಇವೆಲ್ಲದರ ಜತೆಗೆ ನಿರ್ದೇಶಕಿ ಪ್ರಿಯಾ ಅವರ ಕಾಮಿಡಿ ಟ್ರ್ಯಾಕ್​ ಬಗ್ಗೆಯೂ ಗಮನ ಹರಿಸಿದ್ದಾರೆ. ತಾರಾ ಹಾಗೂ ಸುಚೇಂದ್ರ ಪ್ರಸಾದ್ ಅಭಿನಯ ತೆರೆಯ ಮೇಲೆ ಬಂದಾಗಲೆಲ್ಲ ಗಮನ ಸೆಳೆದು ಬಿಡುತ್ತದೆ.

ಮೂರನೇ ಸಿನಿಮಾದಲ್ಲಿ ನಿರೂಪ್ ಭಂಡಾರಿ ತಮಗೆ ಒಪ್ಪುವ ಪಾತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿ ಬಹು ದೊಡ್ಡ ಸ್ಕೋಪ್​ ಪಡೆಯುವುದು ರಾಧಿಕಾ ಯಶ್​ ಪಾತ್ರ. ಒಂದೆಡೆ ಸುಂದರಾಂಗಿ, ಜೊತೆಗೆ ಒಳ್ಳೆಯ ಪಾತ್ರ ನಿರ್ವಹಣೆಯನ್ನು ರಾಧಿಕಾ ಬೇಜಾನ್ ಖುಷಿಯಾಗಿ ನಿರ್ವಹಿಸಿದ್ದಾರೆ. ತಾರಾ ಈ ಚಿತ್ರದಲ್ಲಿ ಸಕ್ಕರೆ ಪೊಂಗಲ್ ತಿಂದಷ್ಟೇ ಸಲೀಸಾಗಿ ಅಭಿನಯಿಸಿದ್ದಾರೆ. ಸುಚೇಂದ್ರ ಪ್ರಸಾದ್ ಅರಳು ಹುರಿದಂತೆ ಆಡುವ ಮಾತುಗಳು ಕಾಮಿಡಿ ಟೈಮಿಂಗ್ ಸೂಪರ್ ಆಗಿದೆ.

ಯಶ್ವಂತ್ ಶೆಟ್ಟಿ, ವಿಶಾಲ್, ಭರತ್ ಕಲ್ಯಾಣ್ ಪಾತ್ರಗಳು ಚೆನ್ನಾಗಿ ಮೂಡಿ ಬಂದಿವೆ. ಛಾಯಾಗ್ರಹಕಿ ಪ್ರೀತಾ ಅವರ ಕೆಲಸದಲ್ಲಿ ಕೆಲವು ಪಾತ್ರಗಳು ಫ್ರೇಮ್​​ನಿಂದ ಕಟ್ ಆಗಿವೆ. ಅನೂಪ್ ಭಂಡಾರಿ ಅವರ ಎರಡು ಹಾಡುಗಳು ಚೆನ್ನಾಗಿ ಮೂಡಿಬಂದಿದೆ. ಅದರಲ್ಲಿ ಕುಂತಲ್ಲೆ ನೀನು... ವಿಶೇಷ ಬಗೆಯಲ್ಲಿ ಮೂಡಿಬಂದಿದೆ.

For All Latest Updates

TAGGED:

ABOUT THE AUTHOR

...view details