ಮುಂಬೈ :ಬಾಲಿವುಡ್ ನಟ ಶಾಹಿದ್ ಕಪೂರ್ ‘ಬುಲ್’ ಎಂಬ ಆ್ಯಕ್ಷನ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 1980ರ ದಶಕದ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ. ಟಿ-ಸೀರೀಸ್ನ ಭೂಷಣ್ ಕುಮಾರ್, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಬುಲ್ ಚಿತ್ರಕ್ಕೆ ಆದಿತ್ಯ ನಿಂಬಾಳ್ಕರ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಅಸೀಮ್ ಅರೋರಾ ಮತ್ತು ಬೆಲ್ ಬಾಟಂ ಖ್ಯಾತಿಯ ಪರ್ವೀಜ್ ಶೇಖರ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಾಹಿದ್ ಕಪೂರ್, ನೈಜ ಘಟನೆಗಳಾಧಾರಿತ ಚಿತ್ರ ಇದಾಗಿರಲಿದೆ.
ಇದರಲ್ಲಿ ಪ್ಯಾರಾಟ್ರೂಪರ್ ಪಾತ್ರ ನಿರ್ವಹಿಸಲು ಉತ್ಸುಕನಾಗಿದ್ದೇನೆ ಎಂದರು. ಬುಲ್ ಸಿನಿಮಾ ಬ್ರಿಗೇಡಿಯರ್ ಬುಲ್ಸರಾ ಅವರ ಜೀವನಾಧಾರಿತ ಕಥೆಯಾಗಿದೆ. ಪ್ಯಾರಾಟ್ರೂಪರ್ ತಂಡವನ್ನು ಮುನ್ನಡೆಸುವುದು ಹೇಗೆ ಅನ್ನೋದ್ರ ಕುರಿತು ಚಿತ್ರಕಥೆ ಹೆಣೆಯಲಾಗಿದೆ. ಪ್ಯಾರಾಟ್ರೂಪರ್ ಆಡುವ ಅವಕಾಶವು ಹರ್ಷದಾಯಕವಾಗಿದೆ ಎಂದು ಶಾಹಿದ್ ಹೇಳಿದ್ದಾರೆ.
2019ರ ಬ್ಲಾಕ್ ಬಸ್ಟರ್ ಕಬೀರ್ ಸಿಂಗ್ ಸಿನಿಮಾ ಬಳಿಕ ಕಪೂರ್ ಜತೆ ಮತ್ತೆ ಸಿನಿಮಾ ಮಾಡಲು ಖುಷಿಯಾಗಿದೆ ಎಂದು ಟಿ-ಸರಣಿಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಹೇಳಿದ್ದಾರೆ. ಈ ಚಿತ್ರದ ಥೀಮ್ ಭಾರತದಾದ್ಯಂತ ವೀಕ್ಷಕರಲ್ಲಿ ಪ್ರತಿಧ್ವನಿಸಲಿದ್ದು, 2022ರಲ್ಲಿ ಶೂಟಿಂಗ್ ಶುರುವಾಗಲಿದೆ.