ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು 92ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್ ಸೇರಿ ಇತರ ಖ್ಯಾತ ನಟ-ನಟಿಯರು, ಗಾಯಕರು, ಅಭಿಮಾನಿಗಳು ಲತಾ ಮಂಗೇಶ್ಕರ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಲತಾ ಮಂಗೇಶ್ಕರ್ ಜನ್ಮ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. ಗೌರವಾನ್ವಿತ ಲತಾ ದೀದಿಗೆ ಜನ್ಮ ದಿನದ ಶುಭಾಶಯಗಳು. ಅವರ ಆ ಸುಮಧುರ ಧ್ವನಿ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ವಿನಮ್ರತೆ ಮತ್ತು ಅವರು ಭಾರತೀಯ ಸಂಸ್ಕೃತಿ ಮೇಲೆ ಹೊಂದಿರುವ ಉತ್ಸಾಹಕ್ಕಾಗಿ ಅವರನ್ನು ಗೌರವಿಸಲಾಗುತ್ತದೆ. ಅವರ ಆರ್ಶೀರ್ವಾದ ದೊಡ್ಡ ಶಕ್ತಿಯ ಮೂಲವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆಂದು ಪಿಎಂ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ತಮಗೆ 5 ವರ್ಷವಿರುವಾಗಲೇ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಮರಾಠಿ ಚಿತ್ರ ಪೇಲ್ ಮಂಗಳಲಾ-ಗೌರ್ ಚಿತ್ರಕ್ಕೆ ಹಾಡು ಹಾಡುವುದರ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿ ಅದೇ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ಕೂಡ ಮಾಡಿದ್ದರು.
1942ರಲ್ಲಿ ಲತಾ ಮಂಗೇಶ್ಕರ್ ಅವರಿಗೆ 13 ವರ್ಷವಿದ್ದಾಗ ಅವರ ತಂದೆ ದೀನಾನಾಥ್ ಮಂಗೇಶ್ವರ್ ನಿಧನ ಹೊಂದಿದರು. ಈ ಸಮಯದಲ್ಲಿ ನವಯುಗ ಚಿತ್ರಪತಿ ಸಿನಿಮಾ ಕಂಪನಿ ನಷ್ಟದಲ್ಲಿತ್ತು. ಆ ವೇಳೆ ಚಲನಚಿತ್ರಗಳಲ್ಲಿ ನಟನೆ ಹಾಗೂ ಗಾಯಕಿಯಾಗಿ ಕಂಪನಿಗೆ ಸಹಾಯ ಮಾಡಲಾರಂಭಿಸಿದರು.