ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು ಪುನೀತ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಾದರೂ ಅಭಿಮಾನಿಗಳ ಶುಭ ಹಾರೈಕೆ ಮಾತ್ರ ನಿಂತಿಲ್ಲ. ನಿನ್ನೆಯಿಂದಲೇ ಅಭಿಮಾನಿಗಳು ಪುನೀತ್ಗೆ ಶುಭ ಹಾರೈಸುತ್ತಿದ್ದಾರೆ. ಇಂದು ಕಾಮನ್ ಡಿಪಿ ಮೂಲಕ ಪುನೀತ್ಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪುನೀತ್ಗೆ 'ಯುವರತ್ನ' ಹಾಗೂ 'ಜೇಮ್ಸ್' ಚಿತ್ರತಂಡ ವಿಶೇಷ ಗಿಫ್ಟ್ ನೀಡಿದೆ. ಈಗಾಗಲೇ 'ಯುವರತ್ನ' ಚಿತ್ರದ 3 ಹಾಡುಗಳು ಬಿಡುಗಡೆಯಾಗಿದ್ದು, ಇಂದು ಅಪ್ಪು ಬರ್ತ್ಡೇ ವಿಶೇಷವಾಗಿ ಫೀಲ್ ದಿ ಪವರ್ ಹಾಡಿನ ಪ್ರೋಮೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಪುನೀತ್ ಗಡ್ಡ ಬಿಟ್ಟು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ದೂರಿ ಸೆಟ್ನಲ್ಲಿ ನೂರಾರು ಸಹ ಕಲಾವಿದರ ಜೊತೆ ಪವರ್ ಸ್ಟಾರ್ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿರುವ ಸಾಹಿತ್ಯವನ್ನು ಶಶಾಂಕ್ ಶೇಷಗಿರಿ ಸಖತ್ ಜೋಷ್ನಿಂದ ಹಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್‌ನಲ್ಲಿ ಫೀಲ್ ದಿ ಪವರ್ ಲಿರಿಕಲ್ ಹಾಡು ಬಿಡುಗಡೆ ಆಗಿದ್ದು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್, ಲಕ್ಷಾಂತರ ವೀವ್ಸ್ ಹಾಗೂ ಭರ್ಜರಿ ಕಮೆಂಟ್ ಪಡೆದಿದೆ. 'ಯುವರತ್ನ' ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ.