ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಬದಕಿರುವಾಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಆ ಎಲ್ಲಾ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ವು. ಸಂಚಾರಿ ವಿಜಯ್ ನಿಧನದ ಬಳಿಕ, ಬಿಡುಗಡೆ ಆದ ಮೊದಲ ಸಿನಿಮಾ ಪುಕ್ಸಟ್ಟೆ ಲೈಫು. ಕಳೆದ ತಿಂಗಳು ಸೆಪ್ಟೆಂಬರ್ 24 ರಂದು ಪುಕ್ಸಟ್ಟೆ ಲೈಫು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಚಿತ್ರತಂಡ ಈ ಹಿಂದೆ ಈ ಸಿನಿಮಾದ ಪ್ರಚಾರಕ್ಕಾಗಿ ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ಡಾ.ರಾಜ್‌ಕುಮಾರ್, ಶಂಕರ್‌ನಾಗ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ಕಲಾವಿದರನ್ನು ಬಳಸಿಕೊಂಡು ಅವರೊಂದಿಗೆ ಸಂಚಾರಿ ವಿಜಯ್ ತೆರೆ ಮೇಲೆ ತಮ್ಮ ಚಿತ್ರವನ್ನು ಬೆಂಬಲಿಸುವಂತೆ ಕಾರ್ಟೂನ್ ರೂಪದಲ್ಲಿ ಸಿದ್ಧಪಡಿಸಲಾಗಿದೆ.
'ಪುಕ್ಸಟ್ಟೆ ಲೈಫು' ಚಿತ್ರಕ್ಕಾಗಿ ಭಟ್ರು ಬರೆದ ಪ್ರಮೋಷನಲ್ ಸಾಂಗ್.. ಇದೀಗ ನಿರ್ದೇಶಕ ಹಾಗೂ ಸಾಹಿತಿ ಯೋಗರಾಜ್ ಭಟ್, ಈ ಸಿನಿಮಾವನ್ನ ನೋಡಿ ಮೆಚ್ಚಿದಾರೆ. ಈ ಸಿನಿಮಾ ಪ್ರಚಾರಕ್ಕಾಗಿ ಹಾಡೊಂದನ್ನ ಬರೆದುಕೊಟ್ಟಿದ್ದಾರೆ. ಆ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.
ಚಿತ್ರದ ಪ್ರಮೋಷನಲ್ ಹಾಡು ಆಗಿ ಚಿತ್ರತಂಡ ಬಳಸಿಕೊಂಡಿದೆ. ನಿರ್ದೇಶಕ ಅರವಿಂದ್ ಕುಪ್ಳೀಕರ್, ನಟಿ ಮಾತಂಗಿ ಪ್ರಸನ್ನ ಸೇರಿದಂತೆ ಇಡೀ ಪುಕ್ಸಟ್ಟೆ ಲೈಫು ಚಿತ್ರತಂಡ ಈ ಹಾಡಿನಲ್ಲಿ ಕಾಣಿಸಿಕೊಂಡು, ಪ್ರೇಕ್ಷಕ ಪ್ರಭುಗಳನ್ನ ಆಹ್ವಾನ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಸಂಚಾರಿ ವಿಜಯ್ ಬೀಗ ರಿಪೇರಿ ಮಾಡೋ ಕಾಯಕದ ಶಹಜಹಾನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅತ್ತ ಬೀಗ ರಿಪೇರಿಯಿಂದ ಬರೋ ಕಾಸಿನಿಂದ ಸಂಸಾರದ ಭಾರ ಹೊರಲಾರದೆ ಕಂಗಾಲಾಗಿರೋ ಶಹಜಹಾನ್ ಈ ವ್ಯವಸ್ಥೆಯ ಚಕ್ರಸುಳಿಗೆ ಸಿಕ್ಕು ನಲುಗುವ ಅಪರೂಪದ ಕಥೆಯೊಂದು ಪಕ್ಸಟ್ಟೆ ಲೈಫಿನೊಳಗಿದೆ.
ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಿರ್ದೇಶಕ ಅರವಿಂದ್ ಕುಪ್ಳೀಕರ್ ನಿರ್ದೇಶನವಿದೆ. ಸದ್ಯ ಯೋಗರಾಜ್ ಭಟ್ ಬರೆದಿರುವ ಪುಕ್ಸಟ್ಟೆ ಲೈಫು ಚಿತ್ರದ ಪ್ರಮೋಷನಲ್ ಹಾಡು ಗಮನ ಸೆಳೆಯುತ್ತಿದೆ.