ಬೆಂಗಳೂರು: ತಮ್ಮ ಹತ್ಯೆಗೆ ಸ್ಕೇಚ್ ರೂಪಿಸಲಾಗಿತ್ತು ಎನ್ನುವ ಊಹಾಪೋಹಕ್ಕೆ ರಾಕಿಂಗ್ ಸ್ಟಾರ್ ಯಶ್ ತೆರೆ ಎಳೆದಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಯಶ್, ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ರೌಡಿ ಶೀಟರ್ಗಳು ಅರೆಸ್ಟ್ ಆದಾಗಲೆಲ್ಲ ನನ್ನ ಹೆಸರು ಕೇಳಿ ಬರುತ್ತಿತ್ತು. ಎಲ್ಲವನ್ನೂ ಮೀರಿ ಒಬ್ಬ ನಟನನ್ನು ಕೊಲ್ಲಲು ಸಾಧ್ಯವಾ ಎಂದು ಪ್ರಶ್ನಿಸಿರುವ ಅವರು, ನನ್ನನ್ನು ಕೊಲ್ಲಲು ನಾನೇನು ಕುರಿಯೇ? ನಮ್ಮನ್ನು ರಕ್ಷಿಸಲು ಸರ್ಕಾರ ಇದೆ. ಪೊಲೀಸ್ ವ್ಯವಸ್ಥೆ ಇದೆ. ನನಗೆ ಯಾವುದೇ ರೀತಿಯ ಜೀವ ಭಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಕೇಳಿ ನನ್ನ ಅಭಿಮಾನಿಗಳು ನನಗೆ ಬೆಳಗ್ಗೆಯಿಂದಲೇ ಫೋನ್ ಮಾಡಿ ವಿಚಾರಿಸಿದ್ದಾರೆ. ಆದರೆ ಅವರು, ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಯಶ್ ಅಭಯ ನೀಡಿದ್ದಾರೆ. ಈ ಸಂಬಂಧ ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಯಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸ್ಯಾಂಡಲ್ವುಡ್ ಸ್ಟಾರ್ ನಟನ ಹತ್ಯೆಗೆ ರೌಡಿ ಶೀಟರ್ ಭರತ್ ಸೂಪಾರಿ ಪಡೆದಿದ್ದ ಎನ್ನುವ ವಿಚಾರ ಕಳೆದ ಕೆಲ ದಿನಗಳ ಹಿಂದೆ ಪೊಲೀಸರಿಂದ ಬಹಿರಂಗವಾಗಿತ್ತು. ಸದ್ಯ ಜೈಲಿನಲ್ಲಿದ್ದುಕೊಂಡೇ ಭರತ್ ತನ್ನ ಹುಡುಗರ ಮೂಲಕ ನಟನ ಹತ್ಯೆಗೆ ಸ್ಕೇಚ್ ರೂಪಿಸಿದ್ದು, ಆತನ ಸಹಚರರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರ ರಿವೀಲ್ ಆಗುತ್ತಿದ್ದಂತೆ ಕೆಲ ಮಾಧ್ಯಮಗಳಲ್ಲಿ ನಟ ಯಶ್ ಹತ್ಯೆಗೆ ಸ್ಕೇಚ್ ?ಎಂದು ವರದಿ ಪ್ರಕಟಿಸಿದ್ದವು. ಇದನ್ನು ಗಮನಿಸಿದ ಯಶ್ ಇಂದು ಮಾಧ್ಯಮಗಳ ಎದುರು ಹಾಜರಾಗಿ ಸ್ಪಷ್ಟನೆ ನೀಡಿದ್ರು.
ಇಂತಹ ಉಹಾಪೋಹ ಸುದ್ದಿಗಳನ್ನು ಹಬ್ಬಿಸಬೇಡಿ. ನಿಮಗೆ ಖಚಿತ ಮಾಹಿತಿ ಇದ್ದರೆ ನಂಗೆ ತಿಳಿಸಿ. ಪೊಲೀಸನವರು ಈ ಬಗ್ಗೆ ನಂಗೆ ಹೇಳಿಲ್ಲ. ಆದರೆ, ನೀವು ಯಾವ ಆಧಾರದ ಮೇಲೆ ನನ್ನ ಹೆಸರು ಹಾಗೂ ಫೋಟೋ ಬಳಿಸಿದ್ದೀರಿ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.