ಬೆಂಗಳೂರು:ಎಲ್ಲ ಅಂದುಕೊಂಡಂತೆ ಆಗಿದ್ದರೆ ಕೆಜಿಎಫ್ 2 ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಿ, ಯಶ್ ಅಭಿನಯದ ಹೊಸ ಚಿತ್ರ ಸೆಟ್ಟೇರಬೇಕಿತ್ತು. ಆದರೆ, ಕೋವಿಡ್ ಮೂರನೇ ಅಲೆಯಿಂದ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ.
ಇದೀಗ ಕೆಜಿಎಫ್ 2 ಚಿತ್ರದ ಬಿಡುಗಡೆ ದಿನಾಂಕ ಮುಂದಿನ ವರ್ಷದ ಏಪ್ರಿಲ್ 14ಕ್ಕೆ ಹೋಗಿದ್ದು, ಯಶ್ ಮುಂದಿನ ನಡೆಯೇನು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಪ್ರಮುಖವಾಗಿ ಕೆಜಿಎಫ್ 2 ಚಿತ್ರ ಬಿಡುಗಡೆಯಾದ ಮೇಲೆ ಯಶ್ ಹೊಸ ಚಿತ್ರ ಶುರುವಾಗುತ್ತಾ? ಅಥವಾ ಅದಕ್ಕೂ ಮುನ್ನವೇ ಶುರುವಾಗುತ್ತಾ? ಎಂಬ ಪ್ರಶ್ನೆಯೊಂದು ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ನರ್ತನ್ ನಿರ್ದೇಶನದ ಹೊಸ ಚಿತ್ರದಲ್ಲಿ ಯಶ್ ಅಭಿನಯಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲದ ಸುದ್ದಿಯೇನಲ್ಲ. ಆದರೆ ಇದರ ನಡುವೆಯೇ ತೆಲುಗಿನ ಖ್ಯಾತ ನಿರ್ದೇಶಕ ಬೋಯಪಾಟಿ ಶ್ರೀನು ನಿರ್ದೇಶನದ ಹೊಸ ಚಿತ್ರದಲ್ಲಿ ಯಶ್ ನಟಿಸುವ ಸಾಧ್ಯತೆ ಇದೆ ಎಂಬ ವಿಷಯ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ನಿಶ್ಚಿತಾರ್ಥಕ್ಕೆ 5 ವರ್ಷ: ಸ್ಪೆಷಲ್ ಡೇ ಬಗ್ಗೆ ರಾಧಿಕಾ ಹೇಳಿದ್ದೇನು ನೋಡಿ!
ಬೋಯಪಾಟಿ ಶ್ರೀನು ಕೆಲವು ವರ್ಷಗಳ ಹಿಂದೆ ರಾಮ್ ಚರಣ್ ತೇಜ್‌ಗೆ ಒಂದು ಕಥೆ ಮಾಡಿದ್ದರಂತೆ. ಆದರೆ, ಆ ಕಥೆ ರಾಮ್ ಚರಣ್‌ಗೆ ಇಷ್ಟವಾಗಲಿಲ್ಲ. ಅದನ್ನು ಪಕ್ಕಕ್ಕಿಟ್ಟು ಇನ್ನೊಂದು ಕಥೆ ಮಾಡಿದ ಶ್ರೀನು, ರಾಮ್ ಚರಣ್ ತೇಜ್ ಅಭಿನಯದಲ್ಲಿ ವಿನಯ ವಿಧೇಯ ರಾಮ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಆ ಚಿತ್ರ ಫ್ಲಾಪ್ ಆಗಿದೆ. ತೇಜ್‌ಗೆ ಹೇಳಿದ ಮೊದಲ ಕಥೆಯನ್ನೇ ಇನ್ನಷ್ಟು ಚೆನ್ನಾಗಿ ಮಾಡಿ ಯಶ್‌ಗೆ ಹೇಳಿದ್ದಾರಂತೆ ಶ್ರೀನು. ಇದಕ್ಕೆ ಯಶ್ ಸಹ ಒಪ್ಪಿದ್ದು, ಸದ್ಯದಲ್ಲೇ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ, ಬಾಲಕೃಷ್ಣ ಅಭಿನಯದ ಅಖಂಡ ಎಂಬ ಚಿತ್ರ ನಿರ್ದೇಶಿಸುತ್ತಿರುವ ಶ್ರೀನು, ಆ ಚಿತ್ರ ಬಿಡುಗಡೆಯಾದ ಮೇಲೆ ಯಶ್ ಅಭಿನಯದ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಯಶ್ ಸಹ ಕೆಜಿಎಫ್ ಬಿಡುಗಡೆಯಾದ ಮೇಲೆ ಶ್ರೀನು ನಿರ್ದೇಶನದ ಚಿತ್ರದತ್ತ ಬರಬಹುದು ಎಂಬ ಸುದ್ದಿ ಇದೆ.