ಹಲವು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತ ಯಾದವ್ ಪುತ್ರ ಸುಮುಖ ಸದ್ಯ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ.
ಈ ಹಿಂದೆ ಅವರ ತಾಯಿ ನಂದಿತ ಯಾದವ್ ನಿರ್ದೇಶನದ 'ರಾಜಸ್ಥಾನ್ ಡೈರೀಸ್' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅನುಭವ ಹೊಂದಿರುವ ಸುಮುಖ ಸದ್ಯ 'ಫಿಸಿಕ್ಸ್ ಟೀಚರ್'ಗೆ ಡೈರೆಕ್ಷನ್ ಮಾಡುತ್ತಿದ್ದಾರೆ.
ಚಿತ್ರದಲ್ಲಿ ನಟಿಸುತ್ತಿರುವ ಮಂಡ್ಯ ರಮೇಶ್ ಮಾತನಾಡಿ, ಸುಮುಖ ನನ್ನ ಗೆಳೆಯ ಶಶಿಕುಮಾರ್ ಮಗ. ಅವನನ್ನು ಚಿಕ್ಕಂದಿನಿಂದಲೂ ಬಲ್ಲೆ. ಆದರೆ, ಮೊನ್ನೆ ಒಂದು ದಿನ ಮೈಸೂರಿನ ನನ್ನ ಮನೆಗೆ ಬಂದು, ಈ ಚಿತ್ರದ ಟೀಸರ್ ತೋರಿಸಿ, ಕಥೆ ಹೇಳಿದ. ಕಥೆ ಕೇಳಿ ನನಗೆ ಆಶ್ಚರ್ಯವಾಯಿತು. ತುಂಬಾ ಚೆನ್ನಾಗಿದೆ. ಚಿತ್ರದ ಬಗ್ಗೆ ಅವನ ತಯಾರಿ ಕೇಳಿ ಸಂತೋಷವಾಯಿತು. ಈಗಿನ ಯುವಜನತೆ ತುಂಬಾ ಅಪ್ ಡೇಟ್ ಆಗಿರುತ್ತಾರೆ. ಅವರಿಂದ ನಮ್ಮ ಕಾಲಘಟ್ಟದವರು ತಿಳಿಯುವುದು ಸಾಕಷ್ಟಿದೆ ಎಂದು ಹೇಳಿದರು.
ನಾನು ಈ ಹಿಂದೆ ಯಾನ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರನ್ನು ಭೇಟಿಯಾಗಿದ್ದೆ. ನಾನು ನಾಯಕನಾಗಿ ನಟಿಸಿರುವ ರಾಜಸ್ಥಾನ್ ಡೈರೀಸ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇನ್ನು, ಈ ಚಿತ್ರದ ಕುರಿತು ಹೇಳಬೇಕೆಂದರೆ, ಶೀರ್ಷಿಕೆ ಹೇಳುವಂತೆ ಇದು ಟೀಚರ್ ಮತ್ತು ಶಾಲೆಗಷ್ಟೇ ಮೀಸಲಾದ ಕಥೆಯಲ್ಲ.
ಒಬ್ಬ ಬ್ಯಾಚುಲರ್ ಫಿಸಿಕ್ಸ್ ಟೀಚರ್ ಜೀವನದಲ್ಲಿ ನಡೆಯುವ ಕಥಾ ಹಂದರವಿದು. ಫಿಸಿಕ್ಸ್ ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಎಂಬುದನ್ನು ಹೇಳ ಹೊರಟಿದ್ದೇನೆ. ಅಕ್ಟೋಬರ್ 7ರಿಂದ ಚಿತ್ರೀಕರಣ ಆರಂಭವಾಗುತ್ತಿದೆ.
ಮಾಸಾಂತ್ಯಕ್ಕೆ ಚಿತ್ರೀಕರಣ ಮುಗಿಯುತ್ತದೆ. ಈ ವರ್ಷದ ಕೊನಗೆ ಅಥವಾ ಹೊಸವರ್ಷದ ಆಗಮನದ ವೇಳೆ 'ಫಿಸಿಕ್ಸ್ ಟೀಚರ್' ನಿಮ್ಮ ಮುಂದೆ ಹಾಜರಾಗುತ್ತಾನೆ ಎಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ಸುಮುಖ ತಿಳಿಸಿದರು.