ಹೈದರಾಬಾದ್:ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆ ನಟ, ನಿರೂಪಕ ಕ್ರಿಸ್ ರಾಕ್ ಅವರ ಕಪಾಳಕ್ಕೆ ನಟ ವಿಲ್ ಸ್ಮಿತ್ ಹೊಡೆದ ಘಟನೆ ಸಾಕಷ್ಟು ಸುದ್ದಿಯಾಗಿದ್ದು, ಎಲ್ಲರಿಗೂ ಗೊತ್ತಿದೆ. ಈಗ ಘಟನೆ ಬಗ್ಗೆ ಖುದ್ದು ವಿಲ್ ಸ್ಮಿತ್ ಕ್ಷಮೆಯಾಚಿಸಿದ್ದಾರೆ.
ಪತ್ನಿ ಜಡಾ ಪಿಂಕೆಟ್ ಬಗ್ಗೆ ಕ್ರಿಸ್ ರಾಕ್ ಗೇಲಿ ಮಾಡಿದ್ದಕ್ಕೆ ಕೋಪಗೊಂಡಿದ್ದ ವಿಲ್ ಸ್ಮಿತ್ ವೇದಿಕೆ ಮೇಲೆಯೇ ಕಪಾಳಕ್ಕೆ ಬಾರಿಸಿದ್ದರು. ಆದರೆ, ವಿಲ್ ಸ್ಮಿತ್ ವರ್ತನೆ ಬಗ್ಗೆ ಪರ ಮತ್ತು ವಿರೋಧವಾದ ಹೇಳಿಕೆಗಳು ಕೇಳಿ ಬರುತ್ತಿದ್ದವು. ವೇದಿಕೆಗೆ ತೋರಿದ ಅಗೌರವ ಎಂದೂ ಕೆಲವರು ಬೇಸರ ವ್ಯಕ್ತಪಡಿಸಿದರು. ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಭಾಷಣ ಮಾಡಿದಾಗಲೂ ವಿಲ್ ಸ್ಮಿತ್ ಕ್ಷಮೆಯಾಚಿಸಿರಲಿಲ್ಲ.
ಇದೀಗ ಈ ಘಟನೆ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿರುವ ವಿಲ್ ಸ್ಮಿತ್, ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಹಿಂಸಾಚಾರವು ಎಲ್ಲ ರೀತಿಯಿಂದಲೂ ವಿಷಕಾರಿ ಮತ್ತು ವಿನಾಶಕಾರಿಯಾಗಿದೆ. ಅಲ್ಲದೇ, ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದ ವೇದಿಕೆ ಮೇಲೆ ನಾನು ತೋರಿದ ವರ್ತನೆ ಸ್ವೀಕಾರಾರ್ಹವಲ್ಲ ಹಾಗೂ ಅದನ್ನು ಕ್ಷಮಿಸಲಾಗದು. ಹದ್ದು ಮೀರಿದ ವರ್ತನೆಯಾಗಿ ನಾನು ತಪ್ಪು ಮಾಡಿದ್ದೇನೆ ಎಂದು ಹಾಲಿವುಡ್ ನಟ ಹೇಳಿಕೊಂಡಿದ್ದಾರೆ.
ಹ್ಯಾಸವು ಒಂದು ಭಾಗ ನಿಜ. ಆದರೆ, ಜಡಾ ವೈದ್ಯಕೀಯ ಸ್ಥಿತಿಯ ಬಗೆಗಿನ ಹ್ಯಾಸ ನನಗೆ ಸಹಿಸಲಾಗಲಿಲ್ಲ. ಹೀಗಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಈ ಬಗ್ಗೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಈ ಘಟನೆಯಿಂದ ನಾನೂ ಮುಜುಗರಕ್ಕೊಳಗಾಗಿದ್ದೇನೆ. ನಾನು ಮನುಷ್ಯನಾಗಲು ಬಯಸುತ್ತೇನೆ. ಪ್ರೀತಿ ಮತ್ತು ದಯೆಯ ಈ ಜಗತ್ತಿನಲ್ಲಿ ಹಿಂಸೆಗೆ ಜಾಗವಿಲ್ಲ ಎಂದೂ ವಿಲ್ ಸ್ಮಿತ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ನಿರೂಪಕನ ಕಪಾಳಕ್ಕೆ ಹೊಡೆದದ್ದೇಕೆ?