ದಕ್ಷಿಣ ಭಾರತದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದ ಬಿಡುಗಡೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ಹಾಗಂತ ಚಿತ್ರತಂಡವೇನೂ ಹೇಳಿಕೊಂಡಿಲ್ಲ.
ಆದರೆ, ಈ ಮೊದಲು ಘೋಷಣೆಯಾದಂತೆ ಜುಲೈ 16ಕ್ಕೆ ಚಿತ್ರ ಬಿಡುಗಡೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಗೊತ್ತಾಗಿದೆ. ಏಕೆಂದರೆ, ಲಾಕ್ಡೌನ್ನಿಂದಾಗಿ ಚಿತ್ರದ ಕೆಲಸಗಳು ಇನ್ನೂ ಮುಗಿದಿಲ್ಲ ಎಂಬುದು ಒಂದು ಕಾರಣವಾದರೆ, ಜುಲೈ 16ರ ಹೊತ್ತಿಗೆ ಚಿತ್ರಪ್ರದರ್ಶನ ಪ್ರಾರಂಭವಾಗುವುದಿಲ್ಲ ಎಂಬುದು ಇನ್ನೊಂದು ಕಾರಣ. ಹಾಗಾಗಿ, ಚಿತ್ರತಂಡ ಬಾಯ್ಬಿಟ್ಟು ಹೇಳದಿದ್ದರೂ ಚಿತ್ರದ ಬಿಡುಗಡೆ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ.
ಕೆಜಿಎಫ್-2 ಬಿಡುಗಡೆ ಯಾವಾಗ? ಎಂಬ ಬಗ್ಗೆ ಚಿತ್ರತಂಡದವರಲ್ಲೂ ಗೊಂದಲ ಇದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಸದ್ಯಕ್ಕೆ ಎಲ್ಲೆಲ್ಲೂ ಅಸ್ಪಷ್ಟ ವಾತಾವರಣವಿದ್ದು, ಇವೆಲ್ಲವೂ ಯಾವಾಗ ಸರಿ ಹೋಗಬಹುದು ಎಂದು ಯಾರಿಗೂ ಗೊತ್ತಿಲ್ಲ. ಸರ್ಕಾರವು ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು, ಚಿತ್ರಪ್ರದರ್ಶನಕ್ಕೆ ಇನ್ನಷ್ಟೇ ಅನುಮತಿ ನೀಡಬೇಕಿದೆ. ಮೊದಲಿಗೆ ಶೇ. 50ರಷ್ಟು ಅನುಮತಿ ಕೊಟ್ಟು, ಆ ನಂತರ ಶೇ. 100ರಷ್ಟು ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಲಾಗುತ್ತದೆ. ಇದೆಲ್ಲಕ್ಕೂ ಏನಿಲ್ಲವೆಂದರೂ ಮೂರು ತಿಂಗಳಾದರೂ ಬೇಕು. ಅಂದರೆ, ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನ ಅಕ್ಟೋಬರ್ನಿಂದ ಎಂದಷ್ಟೇ ಹೇಳಲಾಗುತ್ತಿದೆ.