ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಮುಗಿದಿದ್ದು ಸದ್ಯದಲ್ಲೇ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರೀಕರಣ ಪ್ರಾರಂಭವಾಗಲಿದೆ. ಅದು ಮುಗಿಯುತ್ತಿದ್ದಂತೆಯೇ 'ಕಿರಿಕ್ ಪಾರ್ಟಿ 2' ಚಿತ್ರ ಶುರುವಾಗಲಿವೆ. ಇವೆಲ್ಲವೂ ರಕ್ಷಿತ್ ನಿರ್ಮಾಣದ ಚಿತ್ರಗಳೇ. ರಕ್ಷಿತ್ ತಮ್ಮದೇ ನಿರ್ಮಾಣದ ಚಿತ್ರಗಳಲ್ಲಿ ನಟಿಸುತ್ತಾರೆ ಅಥವಾ ಪುಷ್ಕರ್ನಂತ ಸ್ನೇಹಿತರ ಚಿತ್ರಗಳಲ್ಲಿ ನಟಿಸುತ್ತಾರೆ. ಅದು ಬಿಟ್ಟು ಅವರು ಬೇರೆ ಬ್ಯಾನರ್ ಸಿನಿಮಾಗಳಲ್ಲಿ ನಟಿಸುವುದೇ ಇಲ್ಲ ಎಂಬ ಅಪವಾದ ಅವರ ಮೇಲಿದೆ.
ಯೋಗರಾಜ್ ಭಟ್ ನಿರ್ದೇಶನದ 'ವಾಸ್ತು ಪ್ರಕಾರ', ಗುರು ದೇಶಪಾಂಡೆ ನಿರ್ದೇಶನದ 'ಪಡ್ಡೆಹುಲಿ' ಸೇರಿದಂತೆ 2-3 ಹೊರಗಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ರಕ್ಷಿತ್ ಬೇರೆ ನಿರ್ಮಾಪಕರು ಮತ್ತು ನಿರ್ದೇಶಕರನ್ನು ದೂರವೇ ಇಟ್ಟಿದ್ದಾರೆ. ರಕ್ಷಿತ್‍ಗೆ ಏಕೆ ಹೊರಗಿನ ಬ್ಯಾನರ್ ಚಿತ್ರಗಳಲ್ಲಿ ನಟಿಸಲು ಇಷ್ಟವಿಲ್ಲ..? ಇಂಥದ್ದೊಂದು ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಹೊರಗೆ ಹೋಗಿ ಚಿತ್ರ ಮಾಡಿದರೆ ಅದು ಹೇಗೆ ಮೂಡಿಬರುವುದೋ ಗೊತ್ತಿಲ್ಲ. ಪರಿಚಯವಿರುವವರಿಗೆ ಸಿನಿಮಾ ಮಾಡುವುದು ಒಳ್ಳೆಯದು. ನಾನು ಸಿನಿಮಾ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇನೆ. ಕಳೆದ 4 ವರ್ಷಗಳಲ್ಲಿ ಮಾಡಿದ್ದು ಮೂರೇ ಮೂರು ಸಿನಿಮಾ. 'ಕಿರಿಕ್ ಪಾರ್ಟಿ', 'ಅವನೇ ಶ್ರೀಮನ್ನಾರಾಯಣ' ಮತ್ತು '777 ಚಾರ್ಲಿ'.