ಲಾಕ್‍ಡೌನ್ ತೆರವಾಗಿ ಬೇರೆ ನಟರೆಲ್ಲಾ ಚಿತ್ರೀಕರಣಕ್ಕೆ ವಾಪಸ್ಸಾದರೂ, ದರ್ಶನ್ ಮಾತ್ರ ಇದುವರೆಗೂ ಬಣ್ಣ ಹಚ್ಚಿಲ್ಲ. ಸ್ನೇಹಿತರು, ಕೃಷಿ, ಬೈಕ್ ರೈಡ್ ಅಂತ ತಮ್ಮದೇ ಲೋಕದಲ್ಲಿದ್ದಾರೆ. ಲಾಕ್‍ಡೌನ್‍ಗೂ ಮುನ್ನ ಆರಂಭವಾದ 'ರಾಜವೀರ ಮದಕರಿ ನಾಯಕ' ಚಿತ್ರವನ್ನು ಅವರು ಪೂರ್ಣಗೊಳಿಸುವುದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಕೊನೆಗೂ ಉತ್ತರ ಸಿಕ್ಕಿದೆ. ಜನವರಿಯಿಂದ ಆ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
'ರಾಜವೀರ ಮದಕರಿ ನಾಯಕ' ಚಿತ್ರೀಕರಣ ತಡವಾಗುತ್ತಿರುವುದು ಏಕೆ...? - Raja veera madakari Nayaka
ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಜವೀರ ಮದಕರಿ ನಾಯಕ' ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ ಎನ್ನಲಾಗಿದೆ. ಸದ್ಯಕ್ಕೆ ಥಿಯೇಟರ್ನಲ್ಲಿ ಮೊದಲಿನಂತೆ ಚಿತ್ರ ವೀಕ್ಷಣೆಗೆ ಅವಕಾಶ ಇಲ್ಲದ ಕಾರಣ ಸಿನಿಮಾವನ್ನು ತಡ ಮಾಡಲಾಗುತ್ತಿದೆ ಅಷ್ಟೇ. ಜನವರಿಯಲ್ಲಿ ಎರಡನೇ ಭಾಗದ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
'ರಾಜವೀರ ಮದಕರಿ ನಾಯಕ' ಸಿನಿಮಾ ಚಿತ್ರೀಕರಣ ತಡವಾಗುತ್ತಾ ಹೋದಂತೆ ಈ ಸಿನಿಮಾ ಬಹುಶ: ನಿಂತಿರುವ ಸಾಧ್ಯತೆ ಇದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಹೇಳಿ ಕೇಳಿ ಅದು ಬಿಗ್ ಬಜೆಟ್ ಚಿತ್ರ. ಅಷ್ಟೊಂದು ಹಣ ಹಾಕಿದರೆ ಈ ಸಮಯದಲ್ಲಿ ಜನರು ಚಿತ್ರಮಂದಿರದತ್ತ ಬರುತ್ತಾರಾ...? ಹಾಕಿದ ದುಡ್ಡು ವಾಪಸ್ ಬರುವುದಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಹಾಗಾಗಿ ಈ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಚಿತ್ರತಂಡದವರು ಕೂಡಾ ತೀರ್ಮಾನಿಸಿ, ಚಿತ್ರವನ್ನು ಕೈ ಬಿಟ್ಟಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಚಿತ್ರ ನಿಂತಿಲ್ಲ ಎಂದು ಸ್ವತಃ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ತಂಡದವರ ಜೊತೆಗೆ ಕುಮುಟಾ ಬಳಿ ಇರುವ ಮಿರ್ಜಾನ್ ಕೋಟೆಗೆ ಚಿತ್ರೀಕರಣ ಮಾಡುವುದಕ್ಕೆ ಸೂಕ್ತ ಲೊಕೇಶನ್‍ಗಳನ್ನು ಹುಡುಕಿಕೊಂಡು ಬಂದಿದ್ದಾರೆ. ಅವರು ಹೇಳುವಂತೆ. ಬಹುಶಃ ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.
'ರಾಜವೀರ ಮದಕರಿ ನಾಯಕ' ಚಿತ್ರದ ಒಂದು ಹಂತದ ಚಿತ್ರೀಕರಣ ಈಗಾಗಲೇ ಕೇರಳದಲ್ಲಿ ಈ ವರ್ಷದ ಆರಂಭದಲ್ಲಿ ಮುಗಿದಿತ್ತು. ಎರಡನೆಯ ಹಂತದ ಚಿತ್ರೀಕರಣ ಆರಂಭವಾಗಬೇಕು ಎನ್ನುವಷ್ಟರಲ್ಲಿ ಕೊರೊನಾ ಲಾಕ್‍ಡೌನ್ ಶುರುವಾಯಿತು. ಆಗ ನಿಂತ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಈ ಚಿತ್ರದಲ್ಲಿ ದರ್ಶನ್ ಜೊತೆಗೆ ಸುಮಲತಾ ಅಂಬರೀಶ್ ಅವರು ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ಚಿತ್ರದ ನಾಯಕಿಯರು ಹಾಗೂ ಇತರೆ ಪಾತ್ರವರ್ಗದವರು ಇನ್ನಷ್ಟೇ ಆಯ್ಕೆಯಾಗಬೇಕಿದೆ.