ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜೂನ್ ಎರಡನೇ ವಾರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫಿಲಂ ಚೇಂಬರ್ ಚುನಾವಣೆಯನ್ನು ಮುಂದೂಡಿ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಈ ಆದೇಶದಿಂದ ಈಗಾಗಲೇ ಚುನಾವಣೆಗೆ ತಯಾರಿ ನಡೆಸಿದ್ದವರಲ್ಲಿ ನಿರಾಸೆ ಮೂಡಿಸಿದೆ. 2020 ವಾಣಿಜ್ಯ ಮಂಡಳಿ ಅಧ್ಯಕ್ಷರ ಕುರ್ಚಿ ಮೇಲೆ ಈ ಬಾರಿ ದಿಗ್ಗಜರು ಕಣ್ಣು ಹಾಕಿದ್ದಾರೆ. ಈ ವರ್ಷ ವಾಣಿಜ್ಯ ಮಂಡಳಿ ಅಧ್ಯಕ್ಷ ಗಾದಿ ನಿರ್ಮಾಪಕರ ವಲಯಕ್ಕೆ ಮೀಸಲಾಗಿರುವುದರಿಂದ ಈ ಬಾರಿ ಚುನಾವಣೆಗೆ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಾಗೂ ಬಾ.ಮಾ. ಹರೀಶ್ ಅಧ್ಯಕ್ಷ ಚುನಾವಣೆಗೆ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂವರೂ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದರಿಂದ ಈ ಬಾರಿಯ ವಾಣಿಜ್ಯ ಮಂಡಳಿ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿರುತ್ತದೆ. ಇದೀಗ ಸರ್ಕಾರ ಚುನಾವಣೆಯನ್ನು ಮುಂದೂಡಿರುವುದು ಅಧ್ಯಕ್ಷಗಾದಿಯ ಆಕಾಂಕ್ಷಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದೆ.