ಚೆನ್ನೈ(ತಮಿಳುನಾಡು):ರೋಲ್ಸ್ ರಾಯ್ಸ್ ಕಾರಿನ ಆಮದು ತೆರಿಗೆ ವಿನಾಯತಿ ನೀಡುವಂತೆ ಕೋರಿ ನಟ ಧನುಷ್ ಮದ್ರಾಸ್ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್, ಸಾಮಾನ್ಯ ಜನರು ತೆರಿಗೆ ಕಟ್ಟುವಾಗ, ನಿಮಗೇನು ತೊಂದರೆ? ಎಂದು ಪ್ರಶ್ನೆ ಮಾಡಿದೆ.
2015ರಲ್ಲಿ ಲಂಡನ್ನಿಂದ ಖರೀದಿ ಮಾಡಿದ್ದ ರೋಲ್ಸ್ ರಾಯ್ಸ್ ಕಾರಿಗೆ ಆಮದು ತೆರಿಗೆ ವಿನಾಯಿತಿ ನೀಡುವಂತೆ ನಟ ಧನುಷ್ ಮನವಿ ಮಾಡಿಕೊಂಡಿದ್ದರು. ಇದರ ವಿಚಾರಣೆ ನಡೆಸಿರುವ ಕೋರ್ಟ್ ಬಡವರು, ಮಧ್ಯಮ ವರ್ಗದ ಜನರು ತೆರಿಗೆ ಪಾವತಿ ಮಾಡುತ್ತಿರುವಾಗ, ನಿಮಗೇನು ತೊಂದರೆ? ಐಷಾರಾಮಿ ಕಾರಿನ ಮೇಲೆ ಪ್ರವೇಶ ತೆರಿಗೆ ಪಾವತಿಸಲು ಹಿಂಜರಿಯುತ್ತಿರುವುದು ಏಕೆ? ಎಂದು ಪ್ರಶ್ನೆ ಮಾಡಿದೆ.
2019ರಲ್ಲಿ ಕೇರಳದ ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಗಳಿಗೆ ಪ್ರವೇಶ ತೆರಿಗೆ ವಿಧಿಸುವ ಅಧಿಕಾರವಿದೆ ಎಂದು ಹೇಳಿತ್ತು. ಇದಕ್ಕೂ ಮುನ್ನ ನಟ ಧನುಷ್ ಲಂಡನ್ನಲ್ಲಿ ಖರೀದಿ ಮಾಡಿದ್ದ ರೋಲ್ಸ್ ರಾಯ್ಸ್ ಕಾರಿಗೆ ವಾಣಿಜ್ಯ ಇಲಾಖೆಯಿಂದ ಆಮುದು ತೆರಿಗೆ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
60 ಲಕ್ಷ 66 ಸಾವಿರ ರೂ. ತೆರಿಗೆ ವಿನಾಯತಿ ನೀಡುವಂತೆ ತಿಳಿಸಿದ್ದರು. ಆದರೆ, ಈ ವೇಳೆ ಪ್ರಾದೇಶಿಕ ಸಾರಿಗೆ ಕಚೇರಿ ಶೇ. 50ರಷ್ಟು ತೆರಿಗೆ ಕಟ್ಟಿ ಕಾರು ನೋಂದಣಿ ಮಾಡುವಂತೆ ಸೂಚನೆ ನೀಡಿತ್ತು. ಅದೇ ರೀತಿ ತಮ್ಮ ಕಾರು ನೋಂದಣಿ ಮಾಡಿಕೊಂಡಿದ್ದರು. ಆದರೆ, 2016ರ ಏಪ್ರಿಲ್ನಲ್ಲಿ ನ್ಯಾಯಮೂರ್ತಿ ದುರೈಸ್ವಾಮಿ ನಿಯಮ ಪಾಲನೆ ಮಾಡಿ ಕಾರು ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಇಂದು ಪ್ರಕರಣದ ವಿಚಾರಣೆ ನಡೆದಿದ್ದು, ಈ ವೇಳೆ ನಟರ ಪರವಾಗಿ ಹಾಜರಾದ ವಕೀಲ ವಿಜಯನ್ ಸುಬ್ರಮಣ್ಯಂ, ಉಳಿದ ತೆರಿಗೆ ಹಣ ಪಾವತಿ ಮಾಡಲು ನಾವು ಸಿದ್ಧರಾಗಿದ್ದು, ಪ್ರಕರಣ ಮುಚ್ಚುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿರಿ:ಕೋವಿಡ್ ಫಂಡ್ಗೆ 25 ಲಕ್ಷ ನೀಡಿದ್ದೇನೆ, 1 ಲಕ್ಷ ರೂ. ದಂಡ ಕಟ್ಟಲ್ಲ: ಕೋರ್ಟ್‌ಗೆ ತಿಳಿಸಿದ ದಳಪತಿ ವಿಜಯ್
ಆದರೆ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ನಿಮ್ಮ ವ್ಯವಹಾರದಲ್ಲಿ ಎಷ್ಟು ಕೋಟಿ ಬೇಕಾದರೂ ಸಂಪಾದನೆ ಮಾಡಿ. ಬೇಕಾದಷ್ಟು ಕಾರು ಖರೀದಿಸಿ. ಆದರೆ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಸಂಪೂರ್ಣವಾಗಿ ಪಾವತಿ ಮಾಡಿ. ತಮಿಳುನಾಡು ವಾಣಿಜ್ಯ ತೆರಿಗೆ ಇಲಾಖೆಗೆ ಉಳಿದ ತೆರಿಗೆ ಮೊತ್ತ ತಕ್ಷಣವೇ ಪಾವತಿ ಮಾಡುವಂತೆ ಸೂಚನೆ ನೀಡಿದೆ.ಈಗಾಗಲೇ ನಟ ದಳಪತಿ ವಿಜಯ್ ಕೂಡ ತಮ್ಮ ಐಷಾರಾಮಿ ಕಾರಿಗೆ ತೆರಿಗೆ ವಿನಾಯತಿ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದ್ದು, ಅವರ ವಿರುದ್ಧ ಕೂಡ ನ್ಯಾಯಾಧೀಶರು ವಾಗ್ದಾಳಿ ನಡೆಸಿರುವ ಘಟನೆ ನಡೆದಿದೆ.