ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಮಾತ್ರವಲ್ಲ, ತೆಲುಗು ಸಿನಿಪ್ರಿಯರಿಗೂ ಚಿರಪರಿಚಿತ. ರಾ, ಎ, ಕನ್ಯಾದಾನಂ ಚಿತ್ರಗಳ ಮೂಲಕ ಉಪೇಂದ್ರ, ಆಂಧ್ರ ಹಾಗೂ ತೆಲಂಗಾಣದಲ್ಲಿ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅಲ್ಲು ಅರ್ಜುನ್ ಜೊತೆ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ನಟಿಸಿದ ನಂತರ ಈಗ ವರುಣ್ ಜೊತೆ 'ಗನಿ' ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿರುವುದು ತಿಳಿದ ವಿಚಾರ.
ಕಿರಣ್ ಕೊರ್ರಪಾಟಿ ನಿರ್ದೇಶನದ 'ಗನಿ' ಚಿತ್ರದಲ್ಲಿ ಉಪೇಂದ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳು ನಡೆಯಲಿರುವ ಸಿನಿಮಾ ಚಿತ್ರೀಕರಣದಲ್ಲಿ ಉಪೇಂದ್ರ ಪಾಲ್ಗೊಳ್ಳಲಿದ್ದಾರೆ. ಈ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿರುವ ಉಪೇಂದ್ರ " ನಾನು ಈ ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಬಹಳ ದಿನಗಳ ನಂತರ ಮತ್ತೆ ತೆಲುಗಿನಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಇದು ನಿಜಕ್ಕೂ ವಿಭಿನ್ನ ಪಾತ್ರ ಎಂದೇ ಹೇಳಬಹುದು. ಫೆಬ್ರವರಿ 12 ರಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.