ಲಾಕ್ಡೌನ್ ಮುಗಿದು ಚಿತ್ರರಂಗ ಎಂದಿನಂತೆ ಸಾಗುತ್ತಿದೆ ಎಂಬ ಸಮಾಧಾನ ಒಂದು ಕಡೆ ಆದರೆ, ಪೈರಸಿ ಕಾಟ ಬೆನ್ನತ್ತಿರುವುದು ಚಿತ್ರರಂಗಕ್ಕೆ ಕಾಡುತ್ತಿರುವ ಮತ್ತೊಂದು ಸಮಸ್ಯೆಯಾಗಿದೆ. ಪೈರಸಿ ಆಗುತ್ತಿರುವುದು ಬಿ ಮತ್ತು ಸಿ ಸೆಂಟರ್ಗಳಲ್ಲಿ ಅಲ್ಲ, ಬೆಂಗಳೂರಿನಲ್ಲೇ ಹೆಚ್ಚು ಪೈರಸಿ ನಡೆಯುತ್ತಿದೆ ಎಂದು 'ಯುವರತ್ನ' ಸಿನಿಮಾ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದ 'ಯುವರತ್ನ' ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ಬೆಂಗಳೂರಿನಲ್ಲೇ ಪೈರಸಿ ನಡೆಯುತ್ತಿದೆ. ಆದರೆ ಯಾವ ಚಿತ್ರಮಂದಿರಗಳಲ್ಲಿ ನಡೆಯುತ್ತಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ. ಬೆಂಗಳೂರು ಪೈರಸಿಯ ಕೇಂದ್ರಸ್ಥಾನವಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಇತ್ತೀಚೆಗೆ ರಾಮನಗರದ ಮಧು ಎನ್ನುವವರು ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ 'ರಾಬರ್ಟ್' ಚಿತ್ರವನ್ನು ರೆಕಾರ್ಡ್ ಮಾಡುವ ಪ್ರಯತ್ನ ಮಾಡಿ ಸಿಕ್ಕಿಬಿದ್ದಿದ್ದಾನೆ. ಆತ ರೆಕಾರ್ಡ್ ಮಾಡುತ್ತಿದ್ದು ನೋಡಿ ಅನುಮಾನ ಬಂದ ಚಿತ್ರಮಂದಿರದವರು 'ರಾಬರ್ಟ್' ಚಿತ್ರತಂಡವನ್ನು ಕರೆಸಿ ದೂರು ನೀಡಿದ್ದಾರೆ. ಆತನ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶನಿವಾರ ಕೂಡಾ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ವಿಶ್ವನಾಥ ಎಂಬಾತ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.