ಕೆಲವೊಮ್ಮೆ ಸ್ಟಾರ್ ನಟರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಕೆಲವೊಂದು ಪೋಸ್ಟ್ಗಳು ಚರ್ಚೆಗೆ ಗ್ರಾಸವಾಗುತ್ತದೆ. ಇದೇ ಪೋಸ್ಟ್ಗಳು ಕೆಲವೊಮ್ಮೆ ಆ ಸ್ಟಾರ್ ನಟರ ಅಭಿಮಾನಿಗಳ ನಡುವೆ ಮನಸ್ತಾಪ ತಂದಿಡುತ್ತದೆ.
ಎಚ್ಚರಿಕೆ, ಬೆದರಿಕೆಯಿಂದ ಏನೂ ಆಗಲ್ಲ, ಕಾಲವೇ ಉತ್ತರಿಸುತ್ತದೆ.. ಏನಿದು ನಟ ಸುದೀಪ್ ಟ್ವೀಟ್...? - ಸುದೀಪ್ ಟ್ವೀಟ್
ಸ್ಟಾರ್ ನಟರ ಟ್ವೀಟ್ಗಳು ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿವೆ. ಇಂದು ಮಧ್ಯಾಹ್ನ ಸುದೀಪ್ ಒಂದು ಟ್ವೀಟ್ ಮಾಡಿದ್ದು ಎಚ್ಚರಿಕೆ ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ ಎಂದು ಟ್ವೀಟ್ ಮಾಡಿ ತಮ್ಮ ಬ್ಲಾಗ್ನಲ್ಲಿ ಸುಧೀರ್ಘ ಪತ್ರ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಯಶ್ ಹಾಕಿದ್ದ ಒಂದು ಪೋಸ್ಟ್ ಸ್ಯಾಂಡಲ್ವುಡ್ನಲ್ಲಿ ಚರ್ಚೆಗೆ ಒಳಗಾಗಿತ್ತು. ನಂತರ ಇಂದು ಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕಿದ್ದ 'ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು - ನನ್ನ ಅನ್ನದಾತರು, ಸೆಲಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ' ಎಂದು ತಮ್ಮ ಟ್ವಿಟ್ಟರ್ನಲ್ಲಿ ಹಾಕಿದ್ದ ಪೋಸ್ಟ್ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಮಧ್ಯಾಹ್ನ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಕೂಡಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
'ಪೈಲ್ವಾನ್ ಬಿಡುಗಡೆಯಾದ ಕ್ಷಣದಿಂದ ಸುಮಾರು ವಿಷಯಗಳು ಸಂಭವಿಸುತ್ತಿವೆ. ಆದರೆ ಇವ್ಯಾವು ಒಳ್ಳೆಯ ಲಕ್ಷಣಗಳು ಅಂತ ನನಗನ್ನಿಸುತ್ತಿಲ್ಲ. ಹಾಗೆ ಎಲ್ಲಾ ಸಂದರ್ಭದಲ್ಲೂ, ಎಲ್ಲದಕ್ಕೂ ಉತ್ತರಿಸುತ್ತಾ ಕೂರುವುದು ಕೂಡಾ ಒಳ್ಳೆಯದಲ್ಲ. ಕೆಲವೊಂದು ಸಲ ಕುರುಡನ ಹಾಗೆ, ಕಿವುಡನ ಹಾಗೆ ಇದ್ದುಬಿಟ್ಟರೆ ಅದೆಷ್ಟೋ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳಬಹುದು. ನಿಮ್ಮ ಬದುಕಿನ ಕಡೆ ಗಮನಹರಿಸಿ, ಒಳ್ಳೆಯದನ್ನು ಮಾಡಿ ಇಂತದ್ದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಏಕೆಂದರೆ ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ, ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ' ಎಂದು ಸುಧೀರ್ಘ ಪತ್ತ ಬರೆದಿದ್ದಾರೆ. ಒಟ್ಟಿನಲ್ಲಿ ಇದೆಲ್ಲಾ ಎಲ್ಲಿವರೆಗೂ ಬಂದು ಮುಟ್ಟುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.