ಕರ್ನಾಟಕ

karnataka

ETV Bharat / sitara

ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರದಿಂದ ಕನ್ನಡ ಚಿತ್ರರಂಗಕ್ಕೆ ದೊರೆತ ಕೊಡುಗೆ ಏನು...? - 500 crore to Film city construction

ಬಿಜೆಪಿ ಸರ್ಕಾರ ಜುಲೈ 26ಕ್ಕೆ ಒಂದು ವರ್ಷದ ಅವಧಿ ಪೂರೈಸಲಿದೆ. ಕನ್ನಡ ಚಿತ್ರರಂಗಕ್ಕೆ ಈ ಅವಧಿಯಲ್ಲಿ ಸರ್ಕಾರ ನೀಡುವ ದೊಡ್ಡ ಕೊಡುಗೆ ಫಿಲ್ಮ್​ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಹಣ ಮಂಜೂರು ಮಾಡಿರುವುದು.

Kannada film industry
ಬಿಜೆಪಿ

By

Published : Jul 25, 2020, 5:55 PM IST

ಜುಲೈ 26 ಕ್ಕೆ, ಅಂದರೆ ನಾಳೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬುತ್ತಿದೆ. ಈ ವರ್ಷ ಬಿಎಸ್​​​ವೈಗೆ ಸವಾಲಿನ ವರ್ಷ ಎನ್ನಬಹುದು. ಉಪಚುನಾವಣೆ, ಕೊರೊನಾ ಲಾಕ್​​ಡೌನ್​​, ನೆರೆ ಹಾವಳಿಯಂತ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ.

ಇದರ ಜೊತೆಗೆ 85 ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗಕ್ಕೆ , ಬಿಎಸ್​​ವೈ ಮುಖ್ಯಮಂತ್ರಿಯಾಗಿ ನೀಡಿರುವ ಕೊಡುಗೆ ಏನಿದೆ ಎಂಬುದನ್ನು ನೋಡುವುದಾದರೆ..

ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ಕಟ್ಟಿಸಬೇಕು ಎಂಬ ಆಸೆ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್ ಹಾಗೂ ಹಿರಿಯ ನಿರ್ಮಾಪಕ , ರವಿಚಂದ್ರನ್ ತಂದೆ ವೀರಸ್ವಾಮಿ ಕಾಲದಿಂದಲೂ ಎಲ್ಲರಿಗೂ ಇತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಒಂದು ಹೆಜ್ಜೆ ಮುಂದೆ ಹೋಗಿ, ರಾಮೋಜಿ ರಾವ್ ಒಡೆತನದ ರಾಮೋಜಿ ಫಿಲ್ಮ್ ಸಿಟಿ, ರೀತಿಯ ಚಿತ್ರ ನಗರಿಯನ್ನು ಕಟ್ಟಲು, ಹೆಚ್​​.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಒಂದು ನಕ್ಷೆಯನ್ನು ರೆಡಿ ಮಾಡಿ, 500 ಎಕರೆ ಭೂಮಿ ನೀಡುವಂತೆ ಮನವಿ ಮಾಡಿದ್ದರು.

ಡಾ. ರಾಜ್​​ಕುಮಾರ್, ರವಿಚಂದ್ರನ್

ಆದರೆ ಫಿಲ್ಮ್ ಸಿಟಿ ಕಟ್ಟುವ ಕನಸು ಹಾಗೆ ಉಳಿದಿತ್ತು. ಬಿಜೆಪಿ ಸರ್ಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ, ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ದೊಡ್ಡ ಕೊಡುಗೆ ಅಂದ್ರೆ ಫಿಲ್ಮ್ ಸಿಟಿ ಕಟ್ಟಲು ಬಹುಕೋಟಿ ಹಣವನ್ನು ಮಂಜೂರು ಮಾಡಿರುವುದು. ಈ ವರ್ಷದ ಬಜೆಟ್​​​​​​​​​ನಲ್ಲಿ ಬಿ.ಎಸ್​​​. ಯಡಿಯೂರಪ್ಪ, ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ, ಫಿಲ್ಮ್ ಸಿಟಿ ಕಟ್ಟಲು ಹಣ ಮಂಜೂರು ಮಾಡಿದ್ದಾರೆ. ಆದರೆ ಫಿಲ್ಮ್ ಸಿಟಿ ಎಲ್ಲಿ ಕಟ್ಟಿದ್ರೆ ಚೆನ್ನಾಗಿರುತ್ತದೆ ಎಂಬ ವಿಚಾರ ಮಾತ್ರ ಇಂದಿಗೂ ಚರ್ಚೆಯಾಗುತ್ತಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹೇಳುವ ಪ್ರಕಾರ, ಈಗಾಗಲೇ ಚಿತ್ರ ನಗರಿ ಕಟ್ಟುವ ಸಂಬಂಧ ಒಂದು ಸಮಿತಿ ಮಾಡಲಾಗಿದೆ. ಹಾಗೆ ಇದರ ಬಗ್ಗೆ ಏನೆಲ್ಲಾ ಕೆಲಸಗಳು ಆಗಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ದಿಗ್ಗಜರ ನಟರ ಕನಸನ್ನು ನನಸು ಮಾಡಲು, ಬಿಎಸ್​ವೈ ದೊಡ್ಡ ಕೆಲಸಕ್ಕೆ ಚಾಲನೆ ನೀಡಿರೋದು ಬಹಳ ಸಂತೋಷದ ವಿಚಾರ.

ಕಳೆದ ನಾಲ್ಕು ತಿಂಗಳಿಂದ, ಕೊರೊನಾ ಹಾವಳಿಯಿಂದಾಗಿ‌, ಕನ್ನಡ ಚಿತ್ರರಂಗದಲ್ಲಿ ಶೂಟಿಂಗ್ ಇಲ್ಲದೆ, ಸಿನಿಮಾ ಪ್ರದರ್ಶನ ಇಲ್ಲದೆ ಸ್ತಬ್ಧ ಆಗಿತ್ತು. ಸಿನಿಮಾವನ್ನು ನಂಬಿ ಸಾವಿರಾರು ಜನ ಜೀವನ ನಡೆಸುತ್ತಿದ್ದಾರೆ. ಲೈಟ್ ಬಾಯ್ಸ್, ಸಹ ಕಲಾವಿದರು, ಹೇರ್ ಸ್ಟೈಲಿಸ್ಟ್​, ಕಾಸ್ಟ್ಯೂಮ್ ಡಿಸೈನರ್, ತಂತ್ರಜ್ಞಾನರು, ಪೋಷಕ ಕಲಾವಿದರು ಹಾಗೂ ಸಿನಿಮಾ ಕಾರ್ಮಿಕರು ,ಮೂರು ತಿಂಗಳಿನಿಂದ ಕೆಲಸ ಇಲ್ಲದೆ ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುವಂತ ಪರಿಸ್ಥಿತಿ ಇತ್ತು. ಈ ಸಮಯದಲ್ಲಿ ಬಿ. ಎಸ್​​. ಯಡಿಯೂರಪ್ಪ ಸರ್ಕಾರ, ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ 6 ಸಾವಿರ ಕೂಪನ್​​​​​​​ಗಳನ್ನು ವಿತರಿಸಿದರು. ಇದರ ಜೊತೆಗೆ ಆಹಾರ ಸಚಿವ ಗೋಪಾಲಯ್ಯ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ಸಹಯೋಗದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 25 ಸಾವಿರ ಆಹಾರದ ಕಿಟ್​​​ಗಳನ್ನು ನೀಡಲಾಗಿತ್ತು.

ಕನ್ಡಡ ಚಿತ್ರರಂಗದ ದಿಗ್ಗಜರು

ವಾಣಿಜ್ಯ ಮಂಡಳಿಯಲ್ಲಿರುವ, ನಿರ್ಮಾಪಕರ ವಲಯ, ವಿತರಕರ ವಲಯ, ಪ್ರದರ್ಶಕರ ವಲಯ ಸೇರಿದಂತೆ, ನಿರ್ದೇಶಕರ ಸಂಘ ಹಾಗೂ ಛಾಯಾಗ್ರಾಹಕ ಸಂಘಗಳಿಗೆ ಈ ಆಹಾರದ ಕಿಟ್​​ಗಳನ್ನು ಫಿಲ್ಮ್ ಚೇಂಬರ್ ವತಿಯಿಂದ ವಿತರಿಸಲಾಗಿದೆ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಬಿಎಸ್​​ವೈ ಸರ್ಕಾರ ರಾಯಚೂರು, ಕಲಬುರಗಿ ,ಮಡಿಕೇರಿ ಹಾಗೂ ಸಕಲೇಶಪುರದಲ್ಲಿರುವ ಕಲಾವಿದರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಆಯಾ ಜಿಲ್ಲೆಗಳಲ್ಲಿ ಶೂಟಿಂಗ್ ಸ್ಟುಡಿಯೋಗಳನ್ನು ಮಾಡುವ ಯೋಜನೆ ಮಾಡಿದೆ ಎಂದು ನಿರ್ಮಾಪಕ ಉಮೇಶ್ ಬಣಕಾರ್ ಹೇಳಿದ್ದಾರೆ.

ಮತ್ತೊಂದೆಡೆ, ಕೊರೊನಾ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು, ತಂತ್ರಜ್ಞಾನರು, ಸಿನಿಮಾ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸಹಾಯ ದೊರೆತಿಲ್ಲ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಾದರೂ ಈ ಸರ್ಕಾರದಿಂದ ಚಿತ್ರರಂಗಕ್ಕೆ ಮತ್ತೆ ಯಾವ ರೀತಿಯ ಸಹಾಯ ದೊರೆಯಲಿದೆ ಎಂಬುದನ್ನು ನೋಡಬೇಕು.

ABOUT THE AUTHOR

...view details