ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದ ಮೇಲೆ ಕೊರೊನಾ ಎಂಬ ಕರಿ ನೆರಳು ಆವರಿಸುತ್ತಲೇ ಇದೆ. ಈ ಮಧ್ಯೆ ಅದೆಷ್ಟೋ ಸಿನಿಮಾಗಳು ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿವೆ. ಈ ಸಾಲಿನಲ್ಲಿ ಓಂ ಸಿನಿಮಾ ಖ್ಯಾತಿಯ ಪ್ರೇಮಾ ಹಾಗೂ ಸೋನುಗೌಡ, ನಿಶಾನ್ ನಾಣಯ್ಯ ಅಭಿನಯದ ವೆಡ್ಡಿಂಗ್ ಗಿಫ್ಟ್ ಎಂಬ ಸಿನಿಮಾ ಕೂಡ ಒಂದು.
ಈ ಚಿತ್ರ ಸೈಲೆಂಟ್ ಆಗಿ ಚಿತ್ರೀಕರಣ ಮಾಡಿ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ನಿರ್ದೇಶಕ ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ ವೆಡ್ಡಿಂಗ್ ಗಿಫ್ಟ್ ಚಿತ್ರದ ಚಿತ್ರೀಕರಣ ನಿಗದಿಗಿಂತ ಒಂದು ದಿನ ಮುಂಚಿತಾವಾಗಿಯೇ ಚಿತ್ರೀಕರಣ ಮುಗಿಸಲಾಗಿದೆ. ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾ ನಂತರ ಪ್ರೇಮಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
'ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಚೆನ್ನಾಗಿದ್ದರಷ್ಟೇ ಒಪ್ಪಿಕೊಳ್ಳುವುದು. ಈ ಚಿತ್ರದ ಕಥೆ ಬಗ್ಗೆ ಒಂದೆಳೆ ಹೇಳಿದರೂ, ಪೂರ್ತಿ ಹೇಳಿದಂತೆ. ಉತ್ತಮ ಸಂದೇಶವಿರುವ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ' ಎಂದಿದ್ದಾರೆ ನಟಿ ಪ್ರೇಮ. ಸೋನುಗೌಡ ಮಾತನಾಡಿ, ನಾನು ಚಿತ್ರೀಕರಣ ಮುಗಿಸಿ ಬಂದ ಮೇಲೆ ರಾತ್ರಿ ಕೊರಗುತ್ತಿದ್ದೆ. ನಾನು ಮಾಡಿದ್ದು, ಸರಿನಾ? ತಪ್ಪಾ? ಅಂತಾ ಯೋಚಿಸುತ್ತಿದ್ದೆ. ನನ್ನ ತಂಗಿ ಇದನ್ನು ಸರಿ ಮಾಡಿದ್ದಳು.
ನೀನು ಚಿತ್ರದ ಪಾತ್ರಗಳನ್ನು ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ಅಲ್ಲೇ ಬಿಟ್ಟು ಬಿಡಬೇಕು. ಮನೆಗೆ ಬಂದ ಮೇಲೆ ನೀನು ಸೋನು ಗೌಡ ಆಗಿಯೇ ಇರಬೇಕು ಎಂದಿದ್ದಳು. ಈಗ ಹಾಗೆ ಮಾಡುತ್ತಿದ್ದೇನೆ. ನಾನು ಈವರೆಗೂ ಇಂತಹ ಪಾತ್ರ ಮಾಡಿಲ್ಲ ಅನ್ನಬಹುದು. ಆಕಾಂಕ್ಷ ಎಂಬ ಪಾತ್ರದಲ್ಲಿ ಕಾಣಿಸಿದ್ದೇನೆ. ನೊಂದ ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರ ನನ್ನದು ಅಂದರು.