ಸಾಹಸ ಸಿಂಹ, ವಿಷ್ಣುದಾದ, ಅಭಿನಯ ಭಾರ್ಗವ ಹೀಗೆ ಹಲವಾರು ಬಿರುದುಗಳಿಂದ ಕರೆಯಿಸಿಕೊಂಡ ಕನ್ನಡದ ಏಕೈಕ ನಟ ಡಾ. ವಿಷ್ಣುವರ್ಧನ್. ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಬಹುಭಾಷೆ ಸ್ಟಾರ್ ಹೀರೋ ಆಗಿ ಮೆರೆದ ದಿವಗಂತ ವಿಷ್ಣುವರ್ಧನ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ಡಾ. ರಾಜ್ಕುಮಾರ್ ಜೊತೆ ವಿಷ್ಣುವರ್ಧನ್ ಸೆಪ್ಟಂಬರ್ 18, 1950ರಂದು ಹೆಚ್ ಎಲ್ ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗೆ ಏಳನೇ ಮಗನಾಗಿ ಜನಿಸಿದವರು ವಿಷ್ಣುವರ್ಧನ್. ಕಲಾ ಕುಟುಂಬದಲ್ಲಿ ಹುಟ್ಟಿದ ಸಂಪತ್ ಕುಮಾರ್, ಚಿತ್ರರಂಗದಲ್ಲಿ ವಿಷ್ಣುವರ್ಧನ್ ಆಗಿ ಬೆಳೆದು ಬಂದಿದ್ದು ಮಾತ್ರ ರೋಚಕ.
ಇಂದು ಸಾಹಸ ಸಿಂಹ ಬದುಕಿದ್ದರೆ 71ನೇ ಹುಟ್ಟು ಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರು. ಕೂಲಿ ಕಾರ್ಮಿಕ, ಕಳ್ಳ, ಪೊಲೀಸ್, ಫೋಟೋಗ್ರಾಫರ್, ಭಗ್ನ ಪ್ರೇಮಿಯಾಗಿ, ವೈದ್ಯನಾಗಿ, ಕ್ಯಾನ್ಸರ್ ಪೀಡಿತ ರೋಗಿಯಾಗಿ, ಡಾನ್, ಪೌರಾಣಿಕ ಹೀಗೆ ಎಲ್ಲಾ ತರಹದ ಪಾತ್ರಗಳನ್ನ ಮಾಡಿದ್ದಾರೆ. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಉಳಿದಿದ್ದಾರೆ. ಈ ಮಹಾನ್ ನಟನ ಬಗ್ಗೆ ಯಾರಿಗೂ ಗೊತ್ತಿಲ್ಲದ ಟ್ಯಾಲೆಂಟ್ವೊಂದು ಇತ್ತು. ಅದು ಏನು ಅನ್ನೋದನ್ನ ಹೇಳುತ್ತೇವೆ ಕೇಳಿ.
ಹಾಡಿನಲ್ಲಿ ಮಗ್ನರಾಗಿರುವ ಡಾ. ವಿಷ್ಣುವರ್ಧನ್ ವಿಭಿನ್ನ ಪಾತ್ರಗಳ ಮೂಲಕ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ಸಾಹಸ ಸಿಂಹ ವಿಷ್ಣುವರ್ಧನ್, ಅದ್ಭುತ ನಟ ಅನ್ನೋದಕ್ಕೆ ಅವರು ಅಭಿನಯಿಸಿರೋ ಚಿತ್ರಗಳೇ ಸಾಕ್ಷಿ. ನಾಗರಹಾವು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿಷ್ಣುವರ್ಧನ್ ಸೋತಿದ್ದು ಮಾತ್ರ ಸ್ನೇಹಕ್ಕೆ.
ತನ್ನ ಸ್ನೇಹಮಯಿ ಗುಣದಿಂದಲೇ ಸಿನಿಮಾ ನಿರ್ಮಾಪಕರ ಅಚ್ಚುಮೆಚ್ಚಿನ ನಟನಾಗಿದ್ದ ಅವರು, ಅದ್ಭುತ ಹಾಡುಗಾರ ಅನ್ನೋದು ಅದೆಷ್ಟೋ ಜನಕ್ಕೆ ಗೊತ್ತಿಲ್ಲ. ನಟನೆ ಜೊತೆಗೆ ಹಾಡುವುದು ಅಂದ್ರೆ ಸಾಹಸ ಸಿಂಹನಿಗೆ ಅಚ್ಚುಮೆಚ್ಚು.
ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಷ್ಣುವರ್ಧನ್ ವಿಷ್ಣುವರ್ಧನ್ ಶಾಸ್ತ್ರೀಯವಾಗಿ ಗಾಯನವನ್ನು ಕಲಿತಿದ್ದವರಲ್ಲ. ಸಂಗೀತವನ್ನು ಅಧ್ಯಯನ ಮಾಡಿದವರೂ ಅಲ್ಲ. ಆದರೆ, ಅಭಿನಯ ಶಾರದೆ ಮಾತ್ರ ವಿಷ್ಣುವರ್ಧನ್‌ಗೆ ಒಲಿದಿದ್ದಳು. ವಿಷ್ಣುವರ್ಧನ್, ಏಕಾಏಕಿ ಸಿನಿಮಾಗಳಿಗೆ ಹಾಡಲಿಲ್ಲ. ಮೊದ ಮೊದಲು ಅವರು ಭಕ್ತಿ ಗೀತೆಗಳನ್ನ ಹಾಡೋದಿಕ್ಕೆ ಶುರು ಮಾಡ್ತಾರೆ.
ನಟನಾಗಿದ್ದ ವಿಷ್ಣುದಾದ ಮೊದಲು ಹಾಡಿದ ಹಾಡು ಅಂದರೆ, ತಾಯಿ ಬನಶಂಕರಿ ದೇವಿಯ ಭಕ್ತಿ ಗೀತೆಯನ್ನ. ಅಲ್ಲಿಂದ ಅಯ್ಯಪ್ಪಸ್ವಾಮಿ, ಧರ್ಮಸ್ಥಳ ಮಂಜುನಾಥಸ್ವಾಮಿ, ಮಲೆಮಹದೇಶ್ವರ ಸ್ವಾಮಿಯ ಗೀತೆಗಳನ್ನ ಹಾಡಿ ಸೈ ಎನಿಸಿಕೊಳ್ಳುತ್ತಾರೆ.
ಸಿನಿಮಾವೊಂದರಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಷ್ಣುವರ್ಧನ್ ಈ ಭಕ್ತಿ ಗೀತೆಗಳ ಬಳಿಕ ವಿಷ್ಣುವರ್ಧನ್ ಸಿನಿಮಾಗೆಂದು ಹಾಡೋದಿಕ್ಕೆ ಶುರು ಮಾಡಿದರು. ತಾವೇ ನಟಿಸಿದ ಸಿನಿಮಾ ನಾಗರಹೊಳೆಗೆ ಗೀತ ರಚನೆಕಾರ ಚಿ.ಉದಯ ಶಂಕರ್ ಬರೆದಿರುವ ಸಾಹಿತ್ಯಕ್ಕೆ ಚಲ್ಲಾಪಿಲ್ಲಾ ಸತ್ಯಂ ಸಂಗೀತ ನೀಡಿರುತ್ತಾರೆ.
ಈ ನೋಟಕ್ಕೆ ಮೈಮಾಟಕ್ಕೆ ಎಂಬ ಹಾಡನ್ನ ಅವರು ಹಾಡುವ ಮೂಲಕ ಗಾಯಕರಾಗುತ್ತಾರೆ. ಅವರು ಹಾಡಿದ ಈ ಹಾಡಿಗೆ ಕೋಸಿಂಗರ್ ಆಗಿ, ಭಾರತಿ ವಿಷ್ಣುವರ್ಧನ್ ಧ್ವನಿಯಾಗುವ ಮೂಲಕ ಪತಿಗೆ ಸಾಥ್ ನೀಡ್ತಾರೆ.
ಅಲ್ಲಿಂದ ಕಿಲಾಡಿ ಕಿಟ್ಟು ಚಿತ್ರದಲ್ಲಿ ಮಡಿಲಲ್ಲಿ ಮಗುವಾಗಿ ನಾನು, ಸಾಹಸಸಿಂಹ ಚಿತ್ರದಲ್ಲಿ ಹೇಗಿದ್ದರೂ ನೀನೇ ಚೆನ್ನ, ಸಿರಿತನಕ್ಕೆ ಸವಾಲ್ ಚಿತ್ರದಲ್ಲಿ ಶಶಿಯ ಕಂಡು ಮೋಡ ಹೇಳಿತು, ಸಿಡಿದೆದ್ದ ಸಹೋದರ ಚಿತ್ರದಲ್ಲಿ ಬೇಡ ಅನ್ನೋರೋ ಉಂಟೆ, ನಾಗ ಕಾಳ ಭೈರವ ಚಿತ್ರದಲ್ಲಿ ನಗುವುದೇ ಸ್ವರ್ಗ ಎಂಬ ಹಾಡುಗಳನ್ನ ಹಾಡ್ತಾರೆ. ಆದರೆ, ವಿಷ್ಣುವರ್ಧನ್ ಅಂದುಕೊಂಡಂತೆ ಜನರಿಗೆ ಇಷ್ಟ ಆಗೋಲ್ಲ.
ಇದಾದ ಬಳಿಕ ವಿಷ್ಣುವರ್ಧನ್ ತಾವೇ ನಟಿಸಿದ ಜಿಮ್ಮಿ ಗಲ್ಲು ಚಿತ್ರದಲ್ಲಿ, 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ' ಎಂಬ ಹಾಡನ್ನ ಹಾಡ್ತಾರೆ. ಈ ಹಾಡು ಸೂಪರ್ ಹಿಟ್ ಆಗಿತ್ತು. ಗೀತರಚನೆಕಾರ ಚಿ. ಉದಯಶಂಕರ್ ಬರೆದಿದ್ದ ಸಾಹಿತ್ಯಕ್ಕೆ ವಿಜಯ ಭಾಸ್ಕರ್ ಸಂಗೀತ ನೀಡಿರುತ್ತಾರೆ. ವಿಷ್ಣುವರ್ಧನ್ ಕಂಠ ಸಿರಿಯಲ್ಲಿ ಬಂದ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಹಾಡು ಸೂಪರ್ ಹಿಟ್ ಆಗಿ ಜನರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗುತ್ತೆ.
ಈ ಹಾಡಿನ ಸಕ್ಸಸ್ ನಂತರ ವಿಷ್ಣುವರ್ಧನ್, ಸಿಡಿದೆದ್ದ ಸಹೋದರ, ಖೈದಿ, ಬೆಂಕಿ ಬಿರುಗಾಳಿ, ನಮ್ಮೂರ ರಾಜ, ಶಿವಶಂಕರ್, ಹುಲಿ ಹೆಜ್ಜೆ ಸೇರಿದಂತೆ ಬರೋಬ್ಬರಿ 27 ಸಿನಿಮಾಗಳಲ್ಲಿ ವಿಷ್ಣುವರ್ಧನ್ ಹಾಡಿ ಸಿನಿ ಪ್ರಿಯರನ್ನ ರಂಜಿಸಿದ್ದಾರೆ. ಇನ್ನು ಮಲಯ ಮಾರುತ ಎಂಬ ಚಿತ್ರದಲ್ಲಿ ಒಬ್ಬ ಶಾಸ್ತ್ರೀಯ ಗಾಯಕನಾಗಿ ವಿಷ್ಣುವರ್ಧನ್ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುವುದರ ಜೊತೆಗೆ ಹಾಡಿದ್ದು ನೋಡುಗರನ್ನ ಇಂಪ್ರೆಸ್ ಮಾಡಿತ್ತು.
ಪ್ರಖ್ಯಾತ ಗೀತ ರಚನೆಕಾರ ಚಿ. ಉದಯಶಂಕರ್ ಬರೆದಿರುವ ಸಾಹಿತ್ಯಗಳಿಗೆ ವಿಷ್ಣುವರ್ಧನ್ ಹೆಚ್ಚಾಗಿ ಹಾಡಿದ್ದಾರೆ. ಇನ್ನು, ನಾದಬ್ರಹ್ಮ ಹಂಸಲೇಖ ಸ್ನೇಹಕ್ಕಾಗಿ ತಮ್ಮ 150ನೇ ಸಿನಿಮಾವಾದ ಮೋಜುಗಾರ ಸೊಗಸುಗಾರ ಸಿನಿಮಾದಲ್ಲಿ ಹಾಡಿದ್ದಾರೆ. ಇದಾದ ಬಳಿಕ ಅವರು ಹಾಡಿದ ಕಟ್ಟಕಡೆಯ ಸಿನಿಮಾ ವಿಷ್ಣುಸೇನಾ. ಚಿತ್ರದಲ್ಲಿ 'ಅಭಿಮಾನಿಗಳೇ ನನ್ನ ಪ್ರಾಣ' ಎನ್ನುವ ಗೀತೆ ಅವರು ಹಾಡಿದ ಕಟ್ಟ ಕಡೆಯ ಹಾಡು ಅನ್ನೋದು ವಿಶೇಷ.
ನಟನೆ ಮಾಡುತ್ತಾ, ಗಾಯಕರಾಗಿ ಗುರುತಿಸಿಕೊಂಡ ಮೇಲೆ ವಿಷ್ಣುವರ್ಧನ್ ಕಥೆಗಳನ್ನ ಬರೆಯೋದಿಕ್ಕೆ ಶುರು ಮಾಡ್ತಾರಂತೆ. ಈ ವಿಷಯ ಅದೆಷ್ಟೋ ಜನಕ್ಕೆ ಗೊತ್ತಿಲ್ಲ. ಅವರು 'ಗಣೇಶ ಐ ಲವ್ ಯೂ' ಎಂಬ ಚಿತ್ರಕ್ಕೆ ಕಥೆಯನ್ನು ಬರೆದಿದ್ದರು. ಆ ಕಥೆಯಲ್ಲಿ ನಟನೆ ಮಾಡಿದ್ದು ಅನಂತನಾಗ್. ನಿರ್ದೇಶಕ ಫಣಿ ರಾಮಚಂದ್ರ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು. ಆ ಸಿನಿಮಾ ಕಾಲದಲ್ಲಿ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಡಾ. ವಿಷ್ಣುವರ್ಧನ್ ನಟನಾಗಿ, ಗಾಯಕರಾಗಿ ಹಾಗೂ ಕಥೆಗಾರನಾಗಿ ಚಿತ್ರರಂಗದಲ್ಲಿ ಛಾಪು ಮೂಡಿಸಿದರು ಅಂದರೆ ಅದು ಹೆಮ್ಮೆಯ ವಿಷಯ.
ಓದಿ:ಗಂಡನ ಹುಟ್ಟುಹಬ್ಬಕ್ಕೆ ಫೋಟೋ ಹಂಚಿಕೊಂಡು ವಿಶ್ ಮಾಡಿದ ಪ್ರಿಯಾಂಕಾ ಚೋಪ್ರಾ