ಕೆಲವೊಬ್ಬರು ನಟರಿಗೆ ನಿರ್ದಿಷ್ಟ ಅಕ್ಷರದ ಹೆಸರು, ಸಿನಿಮಾ ಹೆಸರು, ಕಾರಿನ ನಂಬರ್ ಹೀಗೆ ಕೆಲವೊಂದು ವಿಚಾರಗಳಲ್ಲಿ ಅದೃಷ್ಟ ಎಂಬ ನಂಬಿಕೆಯಿದೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ನಟರಿಗೆ ಅದೃಷ್ಟದ ದೇವಸ್ಥಾನ ಕೂಡಾ ಇದೆ.
ಸುದೀಪ್, ಧ್ರುವಾಸರ್ಜಾ ಅದೃಷ್ಟದ ದೇವಸ್ಥಾನದಲ್ಲಿ ಸೆಟ್ಟೇರಿತು ಹೊಸಬರ 'ವಿಕ್ರಮ ಚಿತ್ರ' - ಪೊಗರು
ಕಿಚ್ಚ ಸುದೀಪ್, ಧ್ರುವಾಸರ್ಜಾ ಅವರ ಅದೃಷ್ಟದ ದೇವಸ್ಥಾನ ಎಂದೇ ಹೇಳಲಾಗುವ ನವರಂಗ್ ಥಿಯೇಟರ್ ಬಳಿಯ ಗಣಪತಿ ದೇವಸ್ಥಾನದಲ್ಲಿ ಹೊಸಬರ ಚಿತ್ರವೊಂದು ಸೆಟ್ಟೇರಿದೆ. 'ವಿಕ್ರಮ ಚಿತ್ರ' ಹೆಸರಿನ ಈ ಸಿನಿಮಾ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆ ಹೊಂದಿದೆ.
ಬೆಂಗಳೂರಿನ ನವರಂಗ್ ರಸ್ತೆಯ ಮೋದಿ ಆಸ್ಪತ್ರೆ ಮುಂಭಾಗದ ಗಣಪತಿ ದೇವಸ್ಥಾನದಲ್ಲಿ ಬಹುತೇಕ ನಟರು ತಮ್ಮ ಸಿನಿಮಾದ ಮುಹೂರ್ತ ಸಮಾರಂಭ ಮಾಡುತ್ತಾರೆ. ಈ ದೇವಸ್ಥಾನದಲ್ಲಿ ಸುದೀಪ್ ಅಭಿನಯದ 'ರನ್ನ', ಧ್ರುವಾ ಸರ್ಜಾ ನಟನೆಯ 'ಪೊಗರು' ಸಿನಿಮಾಗಳಿಗೆ ಪೂಜೆ ಮಾಡಲಾಗಿತ್ತು. 'ರನ್ನ' ಸೂಪರ್ ಹಿಟ್ ಆಗಿತ್ತು. 'ಪೊಗರು' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಬ್ಯುಸಿನೆಸ್ ಮಾಡಿದೆ. ಹೀಗಾಗಿ ಹೊಸಬರ ಚಿತ್ರತಂಡವೊಂದು 'ವಿಕ್ರಮ ಚಿತ್ರ' ಎಂಬ ಹೆಸರಿನ ಸಿನಿಮಾವನ್ನು ಈ ಗಣಪತಿ ದೇವಸ್ಥಾನದಲ್ಲಿ ಆರಂಭಿಸಿದೆ.
ಈ ಚಿತ್ರಕ್ಕೆ ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಎನ್.ಎಂ.ಸುರೇಶ್ ಕ್ಲಾಪ್ ಮಾಡಿದರು. ಇದೊಂದು ಸಸ್ಪೆನ್ಸ್ ಕಮ್ ಥ್ರಿಲ್ಲರ್ ಚಿತ್ರ. ಶ್ರೀಯುತ್ ಗೌಡ, ಪ್ರಜ್ವಲ್ ಹಾಗೂ ಮಂಜುನಾಥ್ ಎಂಬ ಮೂವರು ನಾಯಕರು ಸಿನಿಮಾದಲ್ಲಿದ್ದಾರೆ. ಸ್ನೇಹ ಮತ್ತು ಶಿಲ್ಪಾ ಇಬ್ಬರು ನಾಯಕಿಯರು ಚಿತ್ರದಲ್ಲಿದ್ದಾರೆ. ಸಾಕಷ್ಟು ನಿರ್ದೇಶಕರ ಜೊತೆ ಕೆಲಸ ಮಾಡಿರುವ ಶ್ರೀಯುತ್ ಗೌಡ ಆ್ಯಕ್ಟಿಂಗ್ ಜೊತೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಂಜುನಾಥ್ ಅಭಿನಯದ ಜೊತೆಗೆ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಕಾರ್ತಿಕ್ ವೆಂಕಟ್ ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡುವುದರ ಜೊತೆ ಬಂಡವಾಳ ಕೂಡಾ ಹೂಡಿದ್ದಾರೆ. ಚಿಕ್ಕಮಗಳೂರು, ಮೈಸೂರು ಸುತ್ತಮುತ್ತ 'ವಿಕ್ರಮ ಚಿತ್ರ' ಸಿನಿಮಾ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.