ತಮಿಳು ನಟ ಇಳಯ ದಳಪತಿ ವಿಜಯ್ (Vijay) ಅಭಿನಯದ 65ನೇ ಚಿತ್ರದ ಚಿತ್ರೀಕರಣ ಲಾಕ್ ಡೌನ್ಗೂ ಮುನ್ನವೇ ಪ್ರಾರಂಭವಾಗಿತ್ತು. ಚಿತ್ರ ತಂಡವು ಜಾರ್ಜಿಯಾಗೆ ಹೋಗಿ ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿತ್ತು. ಆದರೆ, ಚಿತ್ರದ ಹೆಸರೇನು ಎಂದು ಚಿತ್ರ ತಂಡದವರು ಎಲ್ಲೂ ಬಿಟ್ಟು ಕೊಟ್ಟಿರಲಿಲ್ಲ.
ಇಂದು (ಜೂನ್ 22) ವಿಜಯ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಗಿಫ್ಟ್ ರೂಪದಲ್ಲಿ ಚಿತ್ರ ತಂಡದವರು ಮೊದಲ ಪೋಸ್ಟರ್ ಹಾಗೂ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದಾರೆ.
ಸೋಮವಾರ ಮಧ್ಯಾಹ್ನವೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ 'ಬೀಸ್ಟ್' (Beast) ಎಂಬ ಹೆಸರಿಡಲಾಗಿದೆ. ಈ ಪೋಸ್ಟರ್ ಈಗಾಗಲೇ ವೈರಲ್ ಆಗಿದ್ದು, ವಿಜಯ್ ಅಭಿಮಾನಿಗಳು ಚಿತ್ರದಲ್ಲಿ ಏನಿರಬಹುದು ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಬೀಸ್ಟ್ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದು, ಸನ್ ಪಿಕ್ಚರ್ಸ್ (Sun Pictures) ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ.
ವಿಜಯ್ಗೆ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ನಟಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಿ, ಮುಂದಿನ ಸಂಕ್ರಾಂತಿ ಹೊತ್ತಿಗೆ ಬಿಡುಗಡೆ ಮಾಡುವುದು ಚಿತ್ರ ತಂಡದ ಐಡಿಯಾ.
ಈ ನಿಟ್ಟಿನಲ್ಲಿ ಸದ್ಯದಲ್ಲೇ ಚಿತ್ರೀಕರಣ ಮುಗಿಸಲು ಚಿತ್ರ ತಂಡ ಪ್ಲ್ಯಾನ್ ಮಾಡಿದೆ. ಸೆಪ್ಟೆಂಬರ್ ಹೊತ್ತಿಗೆ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ. ಬಹುಕೋಟಿ ವೆಚ್ಚದಲ್ಲಿ ಚಿತ್ರ ತಯಾರಾಗುತ್ತಿದೆ. ಈ ಚಿತ್ರಕ್ಕೆ ವಿಜಯ್ 80 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮೊದಲ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ.