ತಮ್ಮ ವಿರುದ್ಧ ದುರುದ್ದೇಶಪೂರ್ವಕ ಹಾಗೂ ತಮ್ಮ ಸಮಾಜಸೇವಾ ಕಾರ್ಯಗಳನ್ನು ಪ್ರಶ್ನಿಸಿ ಲೇಖನಗಳನ್ನು ಪ್ರಕಟಿಸುತ್ತಿರುವ ವೆಬ್ಸೈಟ್ ಒಂದರ ವಿರುದ್ಧ ನಟ ವಿಜಯ್ ದೇವರಕೊಂಡ ತಿರುಗಿ ಬಿದ್ದಿದ್ದಾರೆ. ಖ್ಯಾತ ತೆಲುಗು ಸ್ಟಾರ್ಗಳಾದ ಚಿರಂಜೀವಿ, ಮಹೇಶ ಬಾಬು, ಕಾಜಲ್ ಅಗರ್ವಾಲ್, ದಗ್ಗುಬಾಟಿ ರಾಣಾ, ರಾಶಿ ಖನ್ನಾ ಸೇರಿದಂತೆ ಹಲವರು ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ.
ಕೋವಿಡ್ ಸಂಕಷ್ಟದಿಂದ ಕೆಲಸ ಕಳೆದುಕೊಂಡು ಕಷ್ಟದಲ್ಲಿರುವ ತೆಲುಗು ಪ್ರದೇಶಗಳ ಜನರಿಗೆ ಸಹಾಯ ಮಾಡಲು ತಮ್ಮ ದೇವರಕೊಂಡ ಫೌಂಡೇಶನ್ ಮೂಲಕ ವಿಜಯ್ ದೇಣಿಗೆ ಸಂಗ್ರಹಿಸಿದ್ದರು. ಸ್ವತಃ ತಾವು 25 ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ದಾನ ಮಾಡಿದ್ದರು. ದಾನಿಗಳಿಂದ 75 ಲಕ್ಷ ರೂಪಾಯಿಗಳಷ್ಟು ಮೊತ್ತ ಹರಿದು ಬಂದಿತ್ತು. ಇದರಿಂದ ಸುಮಾರು 7500 ಕುಟುಂಬಗಳಿಗೆ ವಿಜಯ್ ಸಹಾಯ ಮಾಡಿದ್ದರು. ಇದನ್ನು ಗೇಲಿ ಮಾಡಿದ್ದ ವೆಬ್ಸೈಟ್, ವಿಜಯ್ ಬಡವರನ್ನು ಅವಮಾನಿಸುತ್ತಿದ್ದಾರೆ ಎಂದು ಬರೆದಿತ್ತು.
ವೆಬ್ಸೈಟ್ನ ಲೇಖನದಿಂದ ಆಕ್ರೋಶಿತರಾದ ವಿಜಯ್ ಸೋಮವಾರ ಸಂಜೆ, ವೆಬ್ಸೈಟ್ ವಿರುದ್ಧ ತಮ್ಮ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದರು. ನಾನು ಆ ವೆಬ್ಸೈಟ್ಗೆ ಸಂದರ್ಶನ ನೀಡಲು ನಿರಾಕರಿಸಿದ್ದಕ್ಕೆ ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ವಿಜಯ್ ಕಿಡಿ ಕಾರಿದ್ದಾರೆ. ಅಲ್ಲದೆ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇಂಥ ಗಾಸಿಪ್ ವೆಬ್ಸೈಟ್ಗಳು ಸಮಾಜಕ್ಕೆ ಕಂಟಕಪ್ರಾಯವಾಗಿವೆ. ಸಾಕಷ್ಟು ನಟ, ನಿರ್ದೇಶಕರು, ನಿರ್ಮಾಪಕರು ಇವುಗಳಿಂದ ನೊಂದಿದ್ದಾರೆ. ಇವನ್ನು ಓದುವ ಓದುಗರು ಸಹ ಸಂತ್ರಸ್ತರೇ ಆಗಿದ್ದಾರೆ. ತಪ್ಪಿ ಮಾಹಿತಿಯನ್ನು ಬಿಂಬಿಸುವ ಮೂಲಕ ಅವರು ಹಣ ಮಾಡುತ್ತಿದ್ದಾರೆ ಎಂದು ವಿಜಯ್ ವೆಬ್ಸೈಟ್ ವಿರುದ್ಧ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಇನ್ನು ವಿಜಯ್ ಪರ ನಿಂತಿರುವ ಹಿರಿಯ ನಟ ಚಿರಂಜೀವಿ ಯುವ ನಟನಿಗೆ ಬೆಂಬಲ ನೀಡಿದ್ದಾರೆ ಮತ್ತು ಅಗತ್ಯವಿದ್ದರೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.