ಮನೆಯಿಂದ ಹೊರ ಬಾರದಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಲಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಲಾಕ್ ಡೌನ್ ಉಲ್ಲಂಘಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್ನ ವಿಜಯ್ ದೇವರಕೊಂಡ ಕೂಡಾ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿರುವ ವಿಜಯ್ ದೇವರಕೊಂಡ, 'ನೀವೆಲ್ಲಾ ಸೇಫ್ ಎಂದು ಭಾವಿಸಿದ್ದೇನೆ, ಕೊರೊನಾದಿಂದ ಪಾರಾಗಲು ನೀವು ಆದಷ್ಟು ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿ, ಹ್ಯಾಂಡ್ ಕರ್ಚೀಫ್, ಸ್ಕಾರ್ಫ್, ನಿಮ್ಮ ತಾಯಿಯ ಚುನ್ನಿಯಿಂದ ಮುಖವನ್ನು ಕವರ್ ಮಾಡಿಕೊಂಡು ಸೇಫ್ ಆಗಿ ಇರಿ, #MaskIndia'ಎಂದು ಪೋಸ್ಟ್ ಹಾಕಿದ್ಧಾರೆ. ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಕೊರತೆ ಇರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಸಮಯದಲ್ಲಿ ವಿಜಯ್ ದೇವರಕೊಂಡ ಜನರಿಗೆ ಈ ರೀತಿ ಮನವಿ ಮಾಡಿದ್ದಾರೆ.
ದೇವರಕೊಂಡ ಮಾತ್ರವಲ್ಲ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು ಸೇರಿ ಬಹುತೇಕ ಟಾಲಿವುಡ್ ಸ್ಟಾರ್ಗಳು ಅಭಿಮಾನಿಗಳಿಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇನ್ನು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಚಿರಂಜೀವಿ, ಮೋಹನ್ ಲಾಲ್ , ಮುಮ್ಮುಟಿ. ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್ ಎಲ್ಲರೂ 'ಫ್ಯಾಮಿಲಿ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದು ಈ ಕಿರುಚಿತ್ರ ಈಗಾಗಲೇ ವೈರಲ್ ಆಗುತ್ತಿದೆ. ಆದರೆ ಇವರೆಲ್ಲಾ ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಈ ಕಿರುಚಿತ್ರದಲ್ಲಿ ಸಂದೇಶ ನೀಡಲಾಗಿದೆ.
ವಿಜಯ್ ದೇವರಕೊಂಡ ಸಿನಿಮಾ ವಿಚಾರಕ್ಕೆ ಬರುವುದಾದರೆ ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಬಾಲಿವುಡ್ ಚಿತ್ರದಲ್ಲಿ ಅನನ್ಯ ಪಾಂಡೆ ಜೊತೆ ನಟಿಸುತ್ತಿದ್ದಾರೆ. ಸದ್ಯಕ್ಕೆ ಲಾಕ್ ಡೌನ್ನಿಂದ ಚಿತ್ರೀಕರಣಕ್ಕೆ ಬ್ರೇಕ್ ನೀಡಲಾಗಿದೆ.