ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗೇಶ್ ಬಾಬ ಇಹಲೋಕ ತ್ಯಜಿಸಿದ್ದಾರೆ. 82 ವರ್ಷದ ನಾಗೇಶ್ ಬಾಬ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಚಿತ್ರರಂಗದಲ್ಲಿ ಸುಮಾರು 63 ವರ್ಷಗಳ ಕಾಲ ಸಕ್ರಿಯರಾಗಿದ್ದ ನಾಗೇಶ್ ಬಾಬ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
'ಅನಿರೀಕ್ಷಿತ' ಸಿನಿಮಾ ನಿರ್ಮಾಪಕ, ನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ - Anirekshita movie producer
ಸುಮಾರು 63 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕ ನಾಗೇಶ್ ಬಾಬ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮಂಡ್ಯ ಜಿಲ್ಲೆಯ ಬೆಳಕವಾಡಿಯಲ್ಲಿ ಹುಟ್ಟಿದ ನಾಗೇಶ್ ಬಾಬ, ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿದರು. ಬಾಲ್ಯದಿಂದಲೂ ಸಿನಿಮಾ ಗೀಳು ಇದ್ದ ಕಾರಣ 1956 ರಲ್ಲಿ ಮದ್ರಾಸಿಗೆ ಹೋಗುತ್ತಾರೆ. 1957ರಲ್ಲಿ ತೆರೆ ಕಂಡ ಆರ್. ನಾಗೇಂದ್ರ ರಾವ್ ನಿರ್ದೇಶನದ 'ಪ್ರೇಮ ಪುತ್ರಿ', ಚಿತ್ರದಲ್ಲಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಸಿನಿಮಾಗೆ ಎಂಟ್ರಿ ಕೊಡುವ ನಾಗೇಶ್ ಬಾಬ ಅಲ್ಲಿಂದ ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಾರೆ.
1970ರಲ್ಲಿ ನಾಗೇಶ್ ಬಾಬ 'ಅನಿರೀಕ್ಷಿತ' ಎಂಬ ಸಿನಿಮಾವನ್ನು ನಿರ್ಮಿಸಿ ನಿರ್ದೇಶಿಸುತ್ತಾರೆ. ಇದುವರೆಗೂ ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಗೇಶ್ ಬಾಬ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ತೆರೆ ಮರೆಯಲ್ಲಿ ಕೂಡಾ ಅನೇಕ ಸಾಮಾಜಿಕ ಕಾರ್ಯಗಳನ್ನೂ ಮಾಡಿದ್ದಾರೆ ನಾಗೇಶ್ ಬಾಬ. ಚೈನ್ನೈ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಲವು ವರ್ಷಗಳ ಕಾಲ ಸೂಪರಿಂಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಾಗೇಶ್ ಬಾಬ ಪತ್ನಿ ಶ್ಯಾಮಲ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.