'ದಯವಿಟ್ಟು ಅಪಾರ್ಥ ಮಾಡ್ಕೋಬೇಡಿ'.... ಎಂಬ ಈ ಡೈಲಾಗ್ ಕೇಳುತ್ತಿದ್ದಂತೆ ನಮಗೆ ನೆನಪಾಗುವುದು ಹಿರಿಯ ನಟ ಉಮೇಶ್. ಇತ್ತೀಚೆಗೆ ಹೊಸ ಕಲಾವಿದರ ದಂಡೇ ಸ್ಯಾಂಡಲ್ವುಡ್ಗೆ ಹರಿದುಬರುತ್ತಿದ್ದು ಎಷ್ಟೋ ಹಿರಿಯ ನಟರು ಅವಕಾಶ ವಂಚಿತರಾಗುತ್ತಿದ್ದಾರೆ.
ಇಷ್ಟು ಪೈಪೋಟಿ ನಡುವೆಯೂ ಹಿರಿಯ, ಕಾಮಿಡಿ ನಟ ಉಮೇಶ್ ಸಿನಿ ಇಂಡಸ್ಟ್ರಿಯಲ್ಲಿ 59 ವರ್ಷಗಳನ್ನು ಪೂರೈಸಿದ್ದಾರೆ. ಇದರೊಂದಿಗೆ ಉಮೇಶ್ ಇಂದು ತಮ್ಮ ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದು ಡಬಲ್ ಖುಷಿಯಲ್ಲಿದ್ದಾರೆ. ಉಮೇಶಣ್ಣ ಅವರ 74ನೇ ವರ್ಷದ ಹುಟ್ಟುಹಬ್ಬವನ್ನು 'ಗರ' ಚಿತ್ರತಂಡ ಆಚರಿಸಿದೆ. ಚಿತ್ರ ಬಿಡುಗಡೆ ಪ್ರೆಸ್ಮೀಟ್ಗೆ ಆಗಮಿಸಿದ್ದ ಉಮೇಶ್ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಸರ್ಪ್ರೈಸ್ ಆಗಿ ಆಚರಿಸಿ ಅವರಿಗೆ ಚಿಕ್ಕ ಸನ್ಮಾನ ಕೂಡಾ ಮಾಡಿದೆ.
ಉಮೇಶ್ಗೆ 'ಗರ' ಚಿತ್ರತಂಡದಿಂದ ಸನ್ಮಾನ ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಉಮೇಶ್, ಹುಟ್ಟುಹಬ್ಬ ಆಚರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಾನು ಇಂಡಸ್ಟ್ರಿಗೆ ಬಂದು 59 ವರ್ಷಗಳಾಯಿತು. ಇಂದಿಗೂ ಬಣ್ಣ ಹಚ್ಚುತ್ತಿದ್ದೀನಿ, ಮುಂದೆಯೂ ಹಚ್ಚುತ್ತೀನಿ. ನನ್ನ ಜೀವನದಲ್ಲಿ ಎಷ್ಟೋ ಕಷ್ಟಗಳು ಬಂದವು. ಅವನ್ನೆಲ್ಲಾ ದಾಟಿ ಇಷ್ಟು ದೂರ ಬರುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಇದಕ್ಕೆಲ್ಲಾ ಜನರ ಆಶೀರ್ವಾದವೇ ಕಾರಣ. ಹಾಗೂ ನನಗೆ ಮಾರ್ಗದರ್ಶನ ನೀಡಿದ ಗುಬ್ಬಿ ವೀರಣ್ಣ, ಹಿರಣಯ್ಯ ಹಾಗೂ ಶ್ರೀಕಂಠಯ್ಯ, ಪುಟ್ಟಣ್ಣ ಕಣಗಾಲ್, ಡಾ. ವಿಷ್ಣುವರ್ಧನ್ ಎಲ್ಲರನ್ನೂ ನಾನು ಸ್ಮರಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದರು.
ಇನ್ನು ವಿಷ್ಣುವರ್ಧನ್ ಅವರ 'ಯಜಮಾನ' ಸಿನಿಮಾ ವೇಳೆ ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಹುಟ್ಟುಹಬ್ಬ ಆಚರಿಸಿದ್ದನ್ನು ಕೂಡಾ ಅವರು ನೆನಪಿಸಿಕೊಂಡರು. ಇನ್ನು ಇದುವರೆಗೂ ಉಮೇಶ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲವಂತೆ. ನಾನು ಏಕೆ ಜನ್ಮ ತಾಳಿದೆ ಎಂದು ಉಮೇಶ್ ಬೇಸರಪಟ್ಟುಕೊಳ್ಳುತ್ತಾರಂತೆ. ಇದಕ್ಕೆ ಕಾರಣ ಅವರು ಅನುಭವಿಸಿದ ಕಷ್ಟಗಳು. ನನ್ನ ಮನಸ್ಸಿನಲ್ಲಿ ಇಷ್ಟು ನೋವಿದ್ದರೂ ನಾನು ಜನರನ್ನು ನಗಿಸಿಕೊಂಡು ಬಂದಿದ್ದೇನೆ. ನನಗೆ ಇನ್ನೂ ನಟಿಸುವ ಆಸೆ ಇದೆ. ಅದಕ್ಕೆ ನಿರ್ಮಾಪಕ, ನಿರ್ದೇಶಕರು ಅವಕಾಶ ನೀಡಬೇಕು. ಇನ್ನು ಎಷ್ಟು ದಿನ ಬದುಕುತ್ತೇನೆ ಗೊತ್ತಿಲ್ಲ. ಆದರೆ ಇರುವಷ್ಟು ದಿನ ಜನರನ್ನು ನಗಿಸಬೇಕು ಎಂಬುದೇ ನನ್ನ ಆಸೆ ಎಂದು ಉಮೇಶ್ ಹೇಳಿದರು.